ಏಕಲವ್ಯ, ಬೆಪ್ ತಕ್ಕಡಿ ಬೋಳೆ ಶಂಕರ ನಾಟಕ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 23
ರಂಗ ವಿಜ್ಞಾನಿ ಶಿವಶಂಕರ್ ಸಾರಥ್ಯದ ಕಾಲೇಜು ರಂಗಪಯಣ ಶುಕ್ರವಾರ ಕೊಟ್ಟೂರಿನಲ್ಲಿ ಸಾಗಿತು.
ಹಾಲ್ಕುರಿಕಿ ಥೇಟರ್ ಕಲಾಬಳಗದ ಸದಸ್ಯರು ಇಲ್ಲಿನ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಕವಿ ಡಾ. ಸಿದ್ದಲಿಂಗಯ್ಯ ರಚನೆಯ ಏಕಲವ್ಯ, ಚಂದ್ರಶೇಖರ ಕಂಬಾರ ರಚನೆಯ ಬೆಪ್ ತಕ್ಕಡಿ ಬೋಳೆ ಶಂಕರ ಎಂಬ ಎರಡು ನಾಟಕ ಪ್ರದರ್ಶಿಸುವ ಮೂಲಕ ಇಲ್ಲಿನ ಪಿಯುಸಿ ವಿದ್ಯಾರ್ಥಿಗಳ ಗಮನ ಸೆಳೆದರು.
ಸಾಮಾಜಿಕ ವರ್ಣ ವ್ಯವಸ್ಥೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಅಟ್ಟಹಾಸದ ಮಧ್ಯೆಯೂ ಏಕಲವ್ಯ ತನ್ನ ಸಾಧನೆ ಛಲ ಬಿಡದೇ ಬಿಲ್ಲು ವಿದ್ಯೆ ಪ್ರಾವಿಣ್ಯ ಪಡೆದ ವಿಧಾನವನ್ನು ವಿವರಿಸುವ ನಾಟಕ ಏಕಲವ್ಯವಾಗಿದ್ದು, ಇದನ್ನೇ ಆಧಾರವಾಗಿರಿಸಿಕೊಂಡು ಬಡ ಮತ್ತು ಕಲಿಯುವ ಮನಸ್ಸುಳ್ಳ ವಿದ್ಯಾರ್ಥಿಗಳು ಎಲ್ಲ ಬಗೆಯ ಕುಂದುಕೊರತೆಗಳನ್ನು ಮೀರಿ ಸಾಧನೆ ತೋರಬೇಕಿದೆ ಎಂದು ರಂಗ ವಿಜ್ಞಾನಿ ಶಿವಶಂಕರ್ ನಾಟಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳಿಗೆ ಕರೆನೀಡಿದರು. ಬಡತನ, ಕುಂದುಕೊರತೆ, ಸಾಧಕನಿಗೆ ವರವೇ ಹೊರತು ಶಾಪವಲ್ಲ ಎಂದು ಹೇಳಿದರು.
ಆಧುನಿಕ ಜೀವನ ಶೈಲಿಯಲ್ಲಿ ಹಣ, ಅಧಿಕಾರ, ಕೀರ್ತಿ, ಹುಚ್ಚು, ಮನುಷ್ಯನಿಗೆ ಇತ್ತೀಚೆಗೆ ಅತಿಯಾಗುತ್ತಿದೆ. ಇದರಿಂದಾಗಿ ಮಾನವ ಸಂಬಂಧಗಳನ್ನೇ ಕಳಚಿಕೊಳ್ಳುವತ್ತ ಮುಂದಾಗುತ್ತಿರುವುದು ದುರಂತ. ಸಮಾಜದ ಅಶಾಂತಿಗೆ ಈ ಎಲ್ಲ ಐಭೋಗಗಳು ಕಾರಣವಾಗಿದೆ ಎಂದು ಹೇಳಿದ ಶಿವಶಂಕರ್ ಅವರು, ಸ್ವಾಭಿಮಾನ, ಸ್ವಾವಲಂಬಿತನ, ಪರೋಪಕಾರದಂಥ ಜೀವನ ಮೌಲ್ಯ ರೂಢಿಸಿಕೊಂಡು ಎಲ್ಲರ ಬದುಕಿಗೆ ಸಹಕಾರಿಯಾಗಬೇಕು ಎಂದರು.
ನಾಟಕ ಪ್ರದರ್ಶನದ ಉದ್ಘಾಟಿಸಿದ ಸ್ಥಳೀಯ ಕಲಾವಿದ ದೇವರಮನಿ ಕೊಟ್ರೇಶ್ ಮಾತನಾಡಿ, ನಾಟಕ ಕಲೆಯ ಮೂಲಕ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬಹುದು ಎಂದರು.
ಉಪ ಪ್ರಾಚಾರ್ಯ ಸಿ.ಬಸವರಾಜ್, ಕಾಲೇಜು ಅಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಸದಸ್ಯ ಐ.ದಾರುಕೇಶ್, ಅನಿಲ ಹೊಸಮನಿ ಮುಖ್ಯ ಅತಿಥಿಗಳಾಗಿದ್ದರು. ಪ್ರಭಾರಿ ಪ್ರಾಚಾರ್ಯ ಯು.ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಸರ್ಪಭೂಷಣ ಸ್ವಾಗತಿಸಿದರು. ಉಪನ್ಯಾಸಕ ಗೋವಿಂದಪ್ಪ ನಿರೂಪಿಸಿದರು.
ಮುಂದಿನ ರಂಗಪಯಣ: ರಂಗಪಯಣದ ರಥ ಕೊಟ್ಟೂರು ಪಟ್ಟಣದ ತುಂಗಭದ್ರಾ ಪದವಿ ಪೂರ್ವ ಕಾಲೇಜಿನಲ್ಲಿ ಆ. 24 ರಂದು ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ, ಆ. 26ರಂದು ಇಂದು ಪದವಿ ಪೂರ್ವ ಕಾಲೇಜಿನಲ್ಲಿ ಆ. 27ರಂದು ಪಯಣಿಸಲಿದೆ.
ಈ ಸಂದರ್ಭದಲ್ಲಿ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಈ ಎರಡು ನಾಟಕಗಳ ಪ್ರದರ್ಶನಗಳು ನಡೆಯಲಿವೆ ಎಂದು ಇದೇ ಸಂದರ್ಭದಲ್ಲಿ ರಂಗವಿಜ್ಞಾನಿ ಶಿವಶಂಕರ್ ತಿಳಿಸಿದರು.