ಡೆಂಘೀ ತಡೆಗೆ ಮುಂಜಾಗ್ರತೆ ವಹಿಸಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಆ. 23
ಡೆಂಘೀ ಜ್ವರಕ್ಕೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಮುಂಜಾಗ್ರತಾ ಕ್ರಮ, ಪೂರ್ವಭಾವಿ ಚಿಕಿತ್ಸೆ ಪಡೆಯುವ ಮೂಲಕ ಸಾವನ್ನು ತಪ್ಪಿಸಬಹುದಾಗಿದೆ ಎಂದು ಕೊಪ್ಪಳ ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ ತಿಳಿಸಿದ್ದಾರೆ.
'ಡೆಂಘೀ ಜ್ವರಕ್ಕೆ ನಿರ್ದಿಷ್ಟ ಔಷಧಿ ಇಲ್ಲ: ಕೈಚೆಲ್ಲಿದ ಡಾಕ್ಟರ್' ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಬಿ. ದಾನರೆಡ್ಡಿ, ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯ ಕೆ.ಬಿ. ಸಂಗಪ್ಪ ತಿಗರಿ ಗ್ರಾಮದಲ್ಲಿ ಸಂಶಯಾಸ್ಪದ ಡೆಂಘೀ ಪ್ರಕರಣಗಳ ಬಗ್ಗೆ ಕೋರಿದ ಮಾಹಿತಿಗೆ ಸಭೆಯಲ್ಲಿ ಉತ್ತರ ನೀಡಿದ್ದೇನೆ. ಡೆಂಘೀ ಪ್ರಕರಣಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳನ್ನು ಆಧರಿಸಿ ಚಿಕಿತ್ಸೆ ನೀಡಿದಲ್ಲಿ ಮುಂದಾಗಬಹುದಾದ ಅನಾಹುತ ತಪ್ಪಿಸಬಹುದು. ಯಾವುದೇ ಕಾರಣಕ್ಕೂ ಆಸ್ಪರಿನ್ ಮತ್ತು ಬ್ರೂಫಿನ್ ಮಾತ್ರೆ ನೀಡಬಾರದು. ಇದರಿಂದ ಹೊಟ್ಟೆಯಲ್ಲಿ ನೋವು ಮತ್ತು ರಕ್ತಸ್ರಾವವಾಗುವ ಸಂಭವವಿರುತ್ತದೆ. ಆದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅತೀ ಮುಖ್ಯ ಎಂಬುದಾಗಿ ವಿವರಣೆ ನೀಡಲಾಗಿದೆ ಎಂದಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಎನ್ವಿಬಿಡಿಸಿಪಿ ಮಾರ್ಗಸೂಚಿಯಲ್ಲಿಯೂ ಡೆಂಘೀ ಜ್ವರ ಮತ್ತು ಚಿಕೂನ್ಗುನ್ಯಕ್ಕೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಸರಿಯಾದ ಮತ್ತು ಪೂರ್ವಭಾವಿ ಚಿಕಿತ್ಸೆ ನೀಡಿದಲ್ಲಿ ಸಾವನ್ನು ತಪ್ಪಿಸಬಹುದಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---