ಬಸಾಯಿ ಕಾರ್ಖಾನೆ ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 23
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಕಾರೆಕಲ್ಲು ಬಳಿಯಿರುವ ಬಸಾಯಿ ಕಾರ್ಖಾನೆಯ ಕಾರ್ಮಿಕರು ಎಐವೈಎಫ್ ನೇತೃತ್ವದಲ್ಲಿ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಎಐವೈಎಫ್‌ನ ಜಿಲ್ಲಾಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಹಲವಾರು ವರ್ಷಗಳಿಂದ ಕಾರ್ಖಾನೆಯಲ್ಲಿ 350ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದರೆ, ಈ ವರೆಗೂ ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಿಲ್ಲ. ಮೂರು ತಿಂಗಳನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ. ಪ್ರತಿದಿನ ರು. 200 ಕೂಲಿ ನೀಡಬೇಕಿದ್ದ ಮಹಿಳೆಯರಿಗೆ ಕೇವಲ ರು. 140 ನೀಡುತ್ತಿದ್ದು, ಉಳಿದ ಹಣದ ಲೆಕ್ಕವಿಲ್ಲ. ಕೆಲಸದ ವೇಳೆ ಕಾರ್ಮಿಕರಿಗೆ ಹೆಲ್ಮೆಟ್ ಸೇರಿದಂತೆ ಇತರೆ ರಕ್ಷಾಕವಚ ನೀಡಲ್ಲ. ಪರಿಣಾಮ ಈಗಾಗಲೇ ಸಾಕಷ್ಟು ಜನರಿಗೆ ಗಾಯಗಳಾಗಿದ್ದು, ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಹೀಗಾಗಿ ಶೌಚಾಲಯ, ಆಸ್ಪತ್ರೆ ಸೇರಿದಂತೆ ಕಾರ್ಮಿಕರ ಇತರೆ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಧ್ಯ ಪ್ರವೇಶಿಸಿ, ಬಸಾಯಿ ಕಾರ್ಖಾನೆ ಮಾಲೀಕರಿಂದ ವೇತನ ಬಿಡುಗಡೆಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಸಮಸ್ಯೆಗಳು ಕುರಿತಂತೆ ಈಗಾಗಲೇ ಕಾರ್ಮಿಕರ ಮಾಲೀಕರಲ್ಲಿ ಕೇಳಿಕೊಂಡಿದ್ದೇವೆ. ಆದರೆ, ಅವರು ಸ್ಪಂದಿಸದ ಕಾರಣ ಕಾರ್ಖಾನೆ ಎದುರೇ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಾಲೀಕರಿಂದ ವೇತನ ದೊರಕಿಸಿಕೊಡುತ್ತೇನೆ ಎಂಬ ಭರವಸೆ ನೀಡಿದ್ದರು. ಆದರೆ, ಕಾರ್ಮಿಕ ಇಲಾಖೆಯ ಅಧಿಕಾರಿ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ವಿಚಾರಿಸಲು ದೂರವಾಣಿ ಸಂಪರ್ಕಕ್ಕೂ ದೊರೆಯುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಮಿಕರು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಗೂ ಸ್ಪಂದಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಸಾಯಿ ಕಾರ್ಖಾನೆ ಮಾಲೀಕರೊಂದಿಗೆ ಚರ್ಚಿಸಿ ವೇತನ ಕೊಡಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು. ಜಿಲ್ಲಾ ಸಂಚಾಲಕ ಕೆ. ರವಿಕುಮಾರ್, ಕೃಷ್ಣಮೂರ್ತಿ, ನಗರ ಘಟಕ ಅಧ್ಯಕ್ಷ ಪ್ರಭು, ತಾಲೂಕು ಘಟಕ ಅಧ್ಯಕ್ಷ ಅಂಜಿನಿ, ಶಂಕರಗೌಡ, ಅಂಗವಿಕಲರ ಸಂಘದ ಅಧ್ಯಕ್ಷ ಶಂಕರ್, ಕಾರೇಕಲ್ ವೀರಭದ್ರಸ್ವಾಮಿ, ಶಿವಪ್ಪ ಇತರರು ಇದ್ದರು.