ಖಾತ್ರಿ ಹಣ ನಿಯಮಬಾಹಿರ ಪಾವತಿ: ಕ್ರಿಮಿನಲ್ ಕೇಸ್
ಹೂವಿನಹಡಗಲಿ: ತಾಲೂಕಿನ ನಾಗತಿ ಬಸಾಪುರ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಹಣವನ್ನು ನಿಯಮ ಬಾಹಿರವಾಗಿ ಪಾವತಿ ಮಾಡಿರುವ ಅಧ್ಯಕ್ಷೆ, ಪಿಡಿಒ ಹಾಗೂ ತಾಂತ್ರಿಕ ಸಹಾಯಕರ ಮೇಲೆ ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಗ್ರಾಪಂ ಅಧ್ಯಕ್ಷೆ ಜಯಮ್ಮ, ಗ್ರಾಪಂ ಪಿಡಿಒ ಸುಭಾಷ ಮೇಟಿ ಹಾಗೂ ತಾಂತ್ರಿಕ ಸಹಾಯಕ ರವೀಂದ್ರ ಸ್ವಾಮಿ ಇವರು ಖಾತ್ರಿ ಹಣವನ್ನು ನಿಯಮ ಬಾಹಿರವಾಗಿ ಪಾವತಿ ಮಾಡಿರುವ ಹಿನ್ನೆಲೆಯಲ್ಲಿ ಇವರ ವಿರುದ್ಧ ಹೂವಿನಹಡಗಲಿ ತಾಪಂ ಇಒ ಎಲ್. ಸಿದ್ದೇಶ್ವರ ಜಿಪಂ ಸಿಇಒ ಮಂಜುನಾಥ ನಾಯಕ್ ಆದೇಶದ ಮೇರೆಗೆ ಕ್ರಿಮಿನಲ್ ಮೊಕದ್ದಮೆಯನ್ನು ಆ. 20ರಂದು ದಾಖಲಿಸಲಾಗಿದೆ.
ಹಿನ್ನೆಲೆ: 2012ರ ಮಾರ್ಚ್ ಅಂತ್ಯಕ್ಕೆ ಜಿಲ್ಲೆಯ 4 ಪಂಚಾಯಿತಿಗಳಲ್ಲಿ ರು. 50 ಲಕ್ಷಕ್ಕೂ ಅಧಿಕ ಅನುದಾನವನ್ನು ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಜಿಪಂ ಸಿಇಒ ತನಿಖೆಗೆ ಆದೇಶಿಸಿದ್ದರು. ಆ ಹಿನ್ನೆಲೆಯಲ್ಲಿ ಹಗರಿಬೊಮ್ಮನಹಳ್ಳಿ ತಾಪಂ ಇಒ ನಾಗತಿ ಬಸಾಪುರ ಪಂಚಾಯಿತಿಗೆ ಭೇಟಿ ನೀಡಿ ಖಾತ್ರಿ ಕಾಮಗಾರಿ ಹಾಗೂ ಕೂಲಿ ಪಾವತಿ ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಗ್ರಾಪಂ ಅಧ್ಯಕ್ಷೆ ಜಯಮ್ಮ, ಪಿಡಿಒ ಸುಭಾಷ ಮೇಟಿ ಹಾಗೂ ತಾಂತ್ರಿಕ ಸಹಾಯಕ ರವೀಂದ್ರ ಸ್ವಾಮಿ ಇವರು ನಿಯಮ ಬಾಹಿರವಾಗಿ ರು. 6.25 ಲಕ್ಷ ಪಾವತಿ ಮಾಡಿದ್ದಾರೆಂದು ತಿಳಿಸಿದ್ದರು.
ವರದಿ ಹಿನ್ನೆಲೆಯಲ್ಲಿ ಪಂಚಾಯಿತಿಯ ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದ ನಂತರ ಈ ಮೂವರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ ಎಂದು ತಾಪಂ ಇಒ ಎಲ್. ಸಿದ್ದೇಶ್ವರ ತಿಳಿಸಿದ್ದಾರೆ. ತಾಲೂಕಿನ ನಂದಿಹಳ್ಳಿ ಗ್ರಾಪಂನಲ್ಲಿ ಪತ್ರಿಕೆಗಳ ವರದಿ ಆಧಾರದ ಮೇಲೆ ಖಾತ್ರಿಯಲ್ಲಿ ಅವ್ಯವಹಾರವಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಒ ಆದೇಶದಂತೆ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಕೂಡಲೇ ತಪ್ಪಿಸ್ಥರ ವಿರುದ್ಧ ಅಲ್ಲಿಯೂ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದುಎಂದು ಎಚ್ಚರಿಸಿದ್ದಾರೆ.