ಪಿಜಿಬಿ- ಕೆಜಿಬಿ ವಿಲೀನ
ಬಳ್ಳಾರಿ: ಗುಲ್ಬರ್ಗ, ಬೀದರ್, ಯಾದಗಿರಿ ಭಾಗದ ಕೃಷ್ಣಾ ಗ್ರಾಮೀಣ ಬ್ಯಾಂಕ್ ಪ್ರಗತಿ ಗ್ರಾಮೀಣ ಬ್ಯಾಂಕಿನಲ್ಲಿ ವಿಲೀನವಾಗುವ ಮೂಲಕ ಈ ಭಾಗದ ಪ್ರಗತಿ ಗ್ರಾಮೀಣ ಬ್ಯಾಂಕ್ ಇನ್ನು ಮುಂದೆ ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಆದರೆ ವಹಿವಾಟಿನಲ್ಲಿ ಗ್ರಾಹಕರ ಸೇವೆಯಲ್ಲಿ ಯಾವುದೇ ವ್ಯತ್ಯಾಸಗಳು ಆಗುವುದಿಲ್ಲ. ಬ್ಯಾಂಕಿನ ಹೆಸರು ಮಾತ್ರ ಬದಲಾವಣೆಯಾಗಿದೆ ಎಂದು ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ಎಂ.ಜಿ. ಭಟ್ ತಿಳಿಸಿದರು.
ಶನಿವಾರ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ಕ್ಷೇತ್ರಗಳ ಬದಲಾವಣೆಗೆ ಗ್ರಾಮೀಣ ಬ್ಯಾಂಕ್‌ಗಳು ಹೊಂದಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ರಾಮೀಣ ಬ್ಯಾಂಕ್‌ಗಳ ವಿಲೀನಕ್ಕೆ ಮುಂದಾಗಿದೆ. ಕೇಂದ್ರ ಸರ್ಕಾರ ವಿತ್ತ ಮಂತ್ರಾಲಯದ ಸೂಚನೆ ಮೇರೆಗೆ ಆ. 23ರಂದು ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವಿಲೀನಗೊಳಿಸಿ ಪ್ರಗತಿ-ಕೃಷ್ಣಾ ಗ್ರಾಮೀಣ ಬ್ಯಾಂಕಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ರು. 13,838 ಕೋಟಿಗೆ ವಹಿವಾಟಿಗೆ ಏರಿಕೆ: ಇದುವರೆಗೆ 4,187 ಹಳ್ಳಿಗಳಲ್ಲಿ ಸೇವೆ ಒದಗಿಸಿದ್ದ ಬ್ಯಾಂಕ್ ಇದೀಗ 4,917 ಹಳ್ಳಿಗಳಿಗೆ ಸೇವೆಯನ್ನು ವಿಸ್ತರಿಸಿದೆ. ಇನ್ನು 434 ಶಾಖೆಗಳ ಸಂಖ್ಯೆ 602ಕ್ಕೆ ಏರಿದೆ. 2,170 ಸಿಬ್ಬಂದಿ ಹೊಂದಿದ್ದ ಬ್ಯಾಂಕ್ 2,860 ಸಿಬ್ಬಂದಿಗಳನ್ನು ಹೊಂದಿದೆ. ಇದಲ್ಲದೇ ರು. 597 ಕೋಟಿ ಸ್ವಂತ ನಿಧಿಯಿಂದ ರು. 786 ಕೋಟಿಗೆ ಏರಿಕೆಯಾಗಿದೆ. ರು. 5,308 ಕೋಟಿಯಿಂದ ರು. 6,913 ಕೋಟಿಗೆ ಏರಿಕೆಯಾಗಿದ್ದರೆ, ಸಾಲ ಪ್ರಮಾಣ ರು. 5,439 ಕೋಟಿಯಿಂದ ರು. 6,925 ಕೋಟಿಗೆ ಏರಿಕೆ ಕಂಡು ಒಟ್ಟಾರೆ ವಹಿವಾಟು ರು. 10,747 ಕೋಟಿಗಳಿಂದ ರು. 13,838 ಕೋಟಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ಯಥಾ ಸ್ಥಿತಿ: ಪ್ರಗತಿ-ಕೃಷ್ಣಾ ಬ್ಯಾಂಕ್‌ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿಯೇ ಇರುತ್ತದೆ. ಸಮ್ಮಿಲನ ಪೂರ್ವದ ಎರಡು ಗ್ರಾಮೀಣ ಬ್ಯಾಂಕ್‌ಗಳ ಎಲ್ಲ ಶಾಖೆಗಳು, ವಿಸ್ತರಣಾ ಕೌಂಟರ್‌ಗಳು ಹಾಗೂ ಇತರೆ ಕಚೇರಿಗಳು ಪ್ರಗತಿ- ಕೃಷ್ಣಾ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರ ಠೇವಣಿ, ಸಾಲದೆ ಖಾತೆಗಳು, ಹಕ್ಕು ಬಾಧ್ಯತೆಗಳು ಹಾಗೂ ಅನ್ಯ ಸೇವಾ ಸೌಲಭ್ಯಗಳು ಯಥಾಪ್ರಕಾರವಾಗಿ ನಡೆಯುತ್ತವೆ. ಇನ್ನು ವಿಧಿ ವಿಧಾನಗಳು, ನಿಯಮಗಳು, ಕೆಲಸದ ವೇಳೆ, ರಜಾ ದಿನಗಳಲ್ಲಿ ಯಾವ ಬದಲಾವಣೆ ಇರುವುದಿಲ್ಲ. ಚೆಕ್‌ಬುಕ್ ಸೌಲಭ್ಯ ಹೊಂದಿರುವ ಗ್ರಾಹಕರು, ಈಗಿರುವ ಚೆಕ್ ಹಾಳೆಗಳನ್ನು ಯಥಾರೀತಿ ಉಪಯೋಗಿಸಬಹುದು. ಆದರೂ ಪಾಸ್ ಬುಕ್, ಚೆಕ್‌ಬುಕ್ ಹೊಂದಿದ ಗ್ರಾಹಕರು ಆಯಾ ಶಾಖೆಗಳಿಗೆ ತೆರಳಿ ಪುಸ್ತಕಗಳ ಮೇಲೆ ಬ್ಯಾಂಕ್‌ನ ಹೊಸ ಹೆಸರನ್ನು ಮುದ್ರಿಸಿಕೊಳ್ಳಬೇಕು, ಹೆಚ್ಚಿನ ಮಾಹಿತಿಗೆ ಸಮೀಪದ ಶಾಖೆ ಸಂಪರ್ಕಿಸಿ ಎಂದರು.
ರವಿ ಸುಧಾಕರ್, ಮಲ್ಲಿಕಾರ್ಜುನ, ವೆಂಕಟರಾವ್, ಜಗದೀಶ್‌ಗೌಡ ಇತರರು ಇದ್ದರು.