ಅನುದಾನ ಬಳಕೆ: ಸಿಂಗ್ ಹಿಂದೇಟು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 25
ಗಣಿನಾಡು, ಐತಿಹಾಸಿಕ ಸ್ಥಳ ಎಂದೇ ಖ್ಯಾತಿ ಪಡೆದ ವಿಜಯನಗರ (ಹೊಸಪೇಟೆ) ಇತಿಹಾಸದಿಂದ ಪ್ರಸಿದ್ಧಿ ಪಡೆದಿದ್ದರೂ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳಿಗಾಗಿ ನೀಡುವ ಅನುದಾನ ಬಳಕೆ, ಅಭಿವೃದ್ಧಿಯಲ್ಲಿ ಹಿಂದೆ ಇದೆ ಎನ್ನಬಹುದು.
ವಿಜಯನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಆನಂದ್ ಸಿಂಗ್ ಅವರು ತಮ್ಮ ಹಿಂದಿನ ಅವಧಿಯಲ್ಲಿ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಈ ಬಾರಿಯಾದರೂ ಅನುದಾನ ಬಳಕೆಗೆ ಹೆಚ್ಚು ಆಸಕ್ತಿ ವಹಿಸುತ್ತಾರೆಯೇ ಎಂಬುದು ಪ್ರಶ್ನಾರ್ಥಕ. 2008-09ರಿಂದ 2012-13ರ ವರೆಗೆ ರು. 475 ಲಕ್ಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ರು. 269.55 ಲಕ್ಷ ಬಳಕೆಯಾಗಿದೆ. ಅದರಲ್ಲುಳಿದ ರು. 205.45 ಲಕ್ಷ ಬಳಕೆಯಾಗಬೇಕಿದೆ. ಆನಂದ್ ಸಿಂಗ್ ತಮ್ಮ ಅನುದಾನದಲ್ಲಿ ಅರ್ಧಕ್ಕಿಂತ ಹೆಚ್ಚಿನ ಹಣವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಡುವ ಮೂಲಕ ಕ್ಷೇತ್ರದಲ್ಲಿ ರಸ್ತೆಗಳತ್ತ ಹೆಚ್ಚು ಕಾಳಜಿ ವಹಿಸಿದ್ದಾರೆ.
ಪ್ರತಿ ಕ್ಷೇತ್ರದ ಶಾಸಕರಿಗೆ ವರ್ಷಕ್ಕೆ ರು. 1 ಕೋಟಿ ಅನುದಾನವನ್ನು ನಾಲ್ಕು ಹಂತಗಳಲ್ಲಿ ಸರ್ಕಾರ ನೀಡುತ್ತಿದ್ದರೂ, ಅನುದಾನದ ಬಳಕೆಯನ್ನು ತೀವ್ರಗತಿಯಲ್ಲಿ ಮಾಡಿಕೊಳ್ಳಲು ವಿಳಂಬ ಮಾಡುತ್ತಿರುವುದು ಅಸಮಾಧಾನದ ಸಂಗತಿ. ಎಲ್ಲ ಶಾಸಕರು ತಮ್ಮ ಅನುದಾನ ಹಂಚಿಕೆಯ ಜತೆಗೆ ಕಾಮಗಾರಿ ಪೂರ್ಣಗೊಳಿಸಲು ಹೆಚ್ಚಿನ ಆಸಕ್ತಿ ತೋರಿದರೆ, ಅನುದಾನ ಬಳಕೆ ಸಾಧ್ಯವಾಗಿ, ಉತ್ತಮ ಅಭಿವೃದ್ಧಿ ಸಾಧ್ಯವಾಗುತ್ತದೆ. ಬಹುತೇಕ ಶಾಸಕರು ಕಾಮಗಾರಿಗಳ ಪ್ರಸ್ತಾವನೆಯಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ, ಆದರೆ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಅಷ್ಟೇ ಆಸಕ್ತಿ ತೋರುವುದೇ ಇಲ್ಲ. ಆಸಕ್ತಿ ತೋರಿದರೆ ಮಾತ್ರ ಅನುದಾನ ಪರಿಣಾಮಕಾರಿ ಬಳಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರು ಹೆಚ್ಚು ಆಸಕ್ತಿ ತೋರಬೇಕಿದೆ.
ಎಷ್ಟು ಅನುದಾನ ಬಳಕೆ?: ಶಾಸಕ ಆನಂದ್ ಸಿಂಗ್ ಅವರಿಗೆ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಒಟ್ಟು ರು. 475 ಲಕ್ಷ ಮಂಜೂರು ಮಾಡಲಾಗಿದೆ. ಅದರಲ್ಲಿ ಕೇವಲ ರು. 269.55 ಲಕ್ಷ ಮಾತ್ರ ಬಳಕೆ ಮಾಡಿದ್ದಾರೆ. 2008-09ರಲ್ಲಿ ರು. 150 ಲಕ್ಷ ಮಂಜೂರಾಗಿದ್ದು, ಅದರಲ್ಲಿ ರು. 142.50 ಲಕ್ಷ ಬಳಕೆಯಾಗಿದೆ. 2009-10ನೇ ಸಾಲಿನಲ್ಲಿ ರು. 50 ಲಕ್ಷ ಅನುದಾನದಲ್ಲಿ ರು. 12.8 ಲಕ್ಷ ಬಳಕೆಯಾಗಿದ್ದರೆ, 2010-11ರಲ್ಲಿ ರು. 1 ಕೋಟಿಯಲ್ಲಿ ರು. 70.18 ಲಕ್ಷ ಬಳಸಲಾಗಿದ್ದರೆ, ಇನ್ನು ರು. 29.82 ಲಕ್ಷ ಬಳಕೆ ಮಾಡಬೇಕಾಗಿದೆ. 2011-12ರಲ್ಲಿ ರು. 1 ಕೋಟಿ ಅನುದಾನ ಮಂಜೂರಾಗಿದ್ದು, ಅದರಲ್ಲಿ ರು. 21.94 ಲಕ್ಷ ಬಳಕೆ ಮಾಡಲಾಗಿದೆ, ಇನ್ನುಳಿದ ರು. 78.06 ಲಕ್ಷ ಬಳಕೆಯಾಗದೇ ಹಾಗೆಯೇ ಉಳಿದಿದೆ. 2012-13ರಲ್ಲಿ ರು. 75 ಲಕ್ಷ ಅನುದಾನದಲ್ಲಿ ಕೇವಲ ರು. 22.13 ಲಕ್ಷ ಮಾತ್ರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗಿದೆ.
ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಆದ್ಯತೆ: ಶಾಸಕ ಆನಂದ್ ಸಿಂಗ್ ತಮ್ಮ ಅನುದಾನದಲ್ಲಿ ಬಹುಪಾಲು ಹಣವನ್ನು ರಸ್ತೆಗಳ ಅಭಿವೃದ್ಧಿಗೆ ಬಳಕೆ ಮಾಡಿಕೊಂಡಿದ್ದಾರೆ. ರು. 475 ಲಕ್ಷ ಅನುದಾನದಲ್ಲಿ ರು. 262.23 ಲಕ್ಷ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಡಲಾಗಿದೆ.
ರಸ್ತೆ ಅಭಿವೃದ್ಧಿಗಾಗಿ 2008-09ನೇ ಸಾಲಿನಲ್ಲಿ ರು. 138.50 ಲಕ್ಷ, 2009-10ನೇ ಸಾಲಿನಲ್ಲಿ ರು. 17 ಲಕ್ಷ, 2010-11ರಲ್ಲಿ ರು. 64.74 ಲಕ್ಷ ಅನುದಾನವನ್ನು, 2011-12ರಲ್ಲಿ ರು. 24.88 ಲಕ್ಷ ಹಾಗೂ 2012-13ನೇ ಸಾಲಿನ ರು. 17.11 ಲಕ್ಷ ಅನುದಾನವನ್ನು ರಸ್ತೆ ಅಭಿವೃದ್ಧಿಗೆ ಶಾಸಕರು ಮೀಸಲಿಟ್ಟಿದ್ದಾರೆ. ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕರು ಹೆಚ್ಚಿನ ಆಸಕ್ತಿ, ಆದ್ಯತೆ ನೀಡಿದ್ದಾರೆ. ಇವರು ಕೂಡ ತಮ್ಮ ಅನುದಾನದಲ್ಲಿ ಎರಡನೇ ಆದ್ಯತೆಯನ್ನು ಸಮುದಾಯ ಭವನಕ್ಕೆ ನೀಡಿದ್ದಾರೆ. ಒಟ್ಟು ರು. 84.40 ಲಕ್ಷ ಸಮುದಾಯ ಭವನಕ್ಕೆ ನೀಡಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಅನುದಾನ ಹಂಚಿಕೆ: ಶಾಸಕರು ತಮ್ಮ ಅನುದಾನದಲ್ಲಿ ಸೇತುವೆಗಳಿಗೆ ರು. 11.08 ಲಕ್ಷ, ಬಸ್ ತಂಗುದಾಣಕ್ಕೆ ರು. 17.50 ಲಕ್ಷ, ಚರಂಡಿ ನಿರ್ಮಾಣಕ್ಕೆ ರು. 21.92 ಲಕ್ಷ, ಕುಡಿಯುವ ನೀರಿನ ಕಾಮಗಾರಿಗೆ ರು. 15.80 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 10 ಲಕ್ಷ, ಆರೋಗ್ಯ ಇಲಾಖೆಗೆ ರು. 2.50 ಲಕ್ಷ, ಗ್ರಂಥಾಲಯ ಅಭಿವೃದ್ಧಿಗೆ ರು. 12.55 ಲಕ್ಷ , ಇತರೆ ಕಾಮಗಾರಿಗಳಿಗೆ ರು. 12.26 ಲಕ್ಷ ನೀಡಿದ್ದಾರೆ.
ಅನುದಾನ ಬಳಕೆಗೆ ಹೆಚ್ಚು ಆಸಕ್ತಿ ತೋರಲಿ: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಆನಂದ್ ಸಿಂಗ್ ಅವರು ಶಾಸಕರಾಗಿ ಮರು ಆಯ್ಕೆಯಾಗಿರುವುದರಿಂದ ಕಳೆದ ಬಾರಿಯಲ್ಲಿ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿರುವ ಶಾಸಕರು, ಈ ಬಾರಿಯಾದರೂ ಅನುದಾನ ಬಳಕೆಗೆ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ.
ಇನ್ನು ತಮ್ಮ ಅನುದಾನವನ್ನು ವಿಶೇಷ ರೀತಿಯಲ್ಲಿ ಬಳಕೆಗೆ ಅವಕಾಶವಿದ್ದು, ಬಳ್ಳಾರಿಯಲ್ಲಿ ಬಹುತೇಕ ಶಾಸಕರು ಈ ನಿಟ್ಟಿನಲ್ಲಿ ಆಸಕ್ತಿವಹಿಸಿಲ್ಲ. ಈ ಬಗ್ಗೆ ಜಿಲ್ಲೆಯ ಶಾಸಕರು ಚಿಂತನೆ ಮಾಡಬೇಕಿದೆ.
ಶಶಿಧರ ಮೇಟಿ