ಈ ಬಾರಿ ನಡೆವುದೇ ಚಿರಿಬಿ ರಥೋತ್ಸವ?
ಕನ್ನಡ ಪ್ರಭವಾರ್ತೆ, ಕೊಟ್ಟೂರು, ಆ. 25
ಸಮೀಪದ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ಪ್ರತಿಷ್ಠೆಯಿಂದಾಗಿ ಸತತ 5 ವರ್ಷಗಳಿಂದ ಆಚರಣೆಗೊಳ್ಳದ ಐತಿಹಾಸಿಕ ಚಿರಿಬಿ ಶ್ರೀ ಮೂಗಬಸವೇಶ್ವರ ಸ್ವಾಮಿ ಮಹಾರಥೋತ್ಸವ ಈ ಬಾರಿಯಾದರೂ ಜರುಗುವುದೇ ಎಂದು ಭಕ್ತರು ಆಶಯದಿಂದ ಕಾದು ನೋಡುತ್ತಿದ್ದಾರೆ.
ನ್ಯಾಯಾಲಯದಲ್ಲಿ ಈ ವಿವಾದದ ಕುರಿತು ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಸಾಗಿದ್ದರೆ, ಇತ್ತ ಭಕ್ತರ ತಂಡವೊಂದು ಈ ಬಾರಿ ಹೇಗಾದರೂ ಸರಿ ರಥೋತ್ಸವ ನಡೆಯುವಂತಾಗಬೇಕೆಂಬ ಪ್ರಸ್ತಾಪವನ್ನು ಮಂಡಿಸಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಶಾಸಕರ ಸಹಕಾರಕ್ಕೆ ಮೊರೆ ಹೋಗಿದೆ. ಅನಾದಿಕಾಲದಿಂದಲೂ ರಥೋತ್ಸವ ಶ್ರಾವಣ ಮಾಸದ ಕೊನೆ ಸೋಮವಾರ ನಡೆದುಕೊಂಡು ಬರುತ್ತಿತ್ತು. ನಾಲ್ಕು ವರ್ಷದಿಂದ ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಕೊನೆಯ ಶ್ರಾವಣ ಸೋಮವಾರ, ಮಂಗಳವಾರ ಮತ್ತು ಬುಧವಾರ ವಿವಿಧ ಸಾಂಸ್ಕೃತಿಕ ಮತ್ತು ಧಾರ್ಮಿಕ ಚಟುವಟಿಕೆಗಳು ಚಿರಿಬಿ ಗ್ರಾಮದಲ್ಲಿ ರಥೋತ್ಸವದ ನಿಮಿತ್ತ ನಡೆಯುತ್ತಿದ್ದವು. ಸುಮಾರು 70 ಸಾವಿರಕ್ಕೂ ಹೆಚ್ಚು ವಿವಿದ ಗ್ರಾಮಗಳ ಗ್ರಾಮಸ್ಥರು ಜಾತ್ರೆಯಲ್ಲಿ ಪಾಲ್ಗೊಂಡು, ಗ್ರಾಮೀಣ ಸೊಗಡಿನ ಸವಿ ಪಡೆಯುತ್ತಿದ್ದರು. ಕುಸ್ತಿ ಪಂದ್ಯ ಮತ್ತಿತರ ಗ್ರಾಮೀಣ ಆಟಗಳು ಸಹ ನಡೆಯುತ್ತಿದ್ದವು. ಆದರೆ ಕಳೆದ ಐದು ವರ್ಷದಿಂದ ಎಲ್ಲವೂ ಬಂದ್ ಆಗಿವೆ.
2007ರಲ್ಲಿ ವಿವಾದ: 2007ರಲ್ಲಿ ಉಭಯ ಗ್ರಾಮಗಳ ಪೈಕಿ ಗ್ರಾಮವೊಂದಕ್ಕೆ ಸೇರಿದ ವ್ಯಕ್ತಿಯೋರ್ವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವದ ಗಾಲಿಯ ಮಿಣಿ ಸೇರಿದಂತೆ ಎಲ್ಲಾ ಪದ್ಧತಿಗಳು ರಾಂಪುರದವರೆಗೆ ಮೀಸಲು ಎಂಬ ಮಾತನ್ನು ಆಡಿದ್ದರ ಹಿನ್ನೆಲೆಯಲ್ಲಿ ಚಿರಿಬಿ ಗ್ರಾಮಸ್ಥರು ಈತನ ಮಾತಿಗೆ ತಕರಾರು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲೇ ಜರುಗಿದ ರಥೋತ್ಸವದಲ್ಲಿ ರಥದ ನಾಲ್ಕು ಗಾಲಿಗಳ ಪೈಕಿ ಒಂದು ಗಾಲಿಗೆ ಭಕ್ತರಿಂದ ತೂರಲ್ಪಡುವ ಬಾಳೆಹಣ್ಣು, ಅರ್ಪಿತವಾಗುವ ತೆಂಗಿನಕಾಯಿ ಚಿರಿಬಿಯವರಿಗೆ ಸೇರಬೇಕೆಂದು ವಾದ ಮಂಡಿಸಿದರು. ಇದು ಉಭಯರ ಮದ್ಯೆ ಗಲಾಟೆಗೆ ತಿರುಗಿ ವಾದ ವಿವಾದ ನಡೆದು ದ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಕೂಡ್ಲಿಗಿ ತಾಲೂಕಾಡಳಿತ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಬಾರದು ಎಂಬ ಕಾರಣಕ್ಕಾಗಿ 2008ರಿಂದ ಚಿರಿಬಿ ಶ್ರೀ ಸ್ವಾಮಿ ರಥೋತ್ಸವವನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಿತ್ತು. ತಾಲೂಕಾಡಳಿತದ ಪ್ರಸ್ತಾವನೆಗೆ ಒಪ್ಪಿ ಜಿಲ್ಲಾಡಳಿತ ಅಂದಿನಿಂದ ರಥೋತ್ಸವ ರದ್ದುಗೊಳಿಸಿದೆ.
ಕೋರ್ಟ್ ಮೆಟ್ಟಿಲೇರಿದ ವಿವಾದ: ಜಿಲ್ಲಾಡಳಿತದ ಈ ತೀರ್ಮಾನದ ವಿರುದ್ಧ ದೇವಸ್ಥಾನದ ಸಮಿತಿ ಧಾರವಾಡದ ಹೈಕೋರ್ಟ್ ಸಂಚಾರಿ ಪೀಠದ ಮೊರೆ ಹೋಗಿ ಮದುವೆ, ಕಾರ್ತೀಕ ದೀಪ ಹಚ್ಚುವುದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಹೈಕೋರ್ಟ್ ಸಂಚಾರಿ ಪೀಠ ಅರ್ಜಿಯನ್ನು ತಿರಸ್ಕರಿಸಿತ್ತು.
ಈ ಸಂಬಂಧ ಮೇಲ್ಮನವಿಯನ್ನು ಚಿರಿಬಿಯ ವೀರಯ್ಯ ಮತ್ತಿತರರು ಸಿವಿಲ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಕೂಡ್ಲಿಗಿ ಸಿವಿಲ್ ನ್ಯಾಯಾಲಯದಲ್ಲಿ ಈ ಕುರಿತು ಎರಡು ಗ್ರಾಮಸ್ಥರ ವಾದ ವಿವಾದ 2009ರಿಂದ ಪ್ರಾರಂಭಗೊಂಡು ಇದೀಗ ಸಾಕ್ಷಿಗಳ ವಿಚಾರಣೆ ಹಂತ ತಲುಪಿದೆ. ವಿವಾದದ ವಿಚಾರಣೆ ಕೂಡ್ಲಿಗಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಈ ಹಂತದಲ್ಲಿ ತಾವೇನೂ ಹೇಳಲು ಬರುವುದಿಲ್ಲ ಎಂದು ರಾಂಪುರ ಗ್ರಾಮದ ವಕೀಲ ಆರ್. ರಮೇಶ್ ಮತ್ತು ಚಿರಿಬಿ ಗ್ರಾಮದ ವೀರಯ್ಯ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಜಿ. ಸೋಮಶೇಖರ