ಚುಡಾಯಿಸುವವರ ವಿರುದ್ಧರೌಡಿಶೀಟರ್ ಕೇಸ್: ರಾಥೋಡ್
ಬಳ್ಳಾರಿ: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿ, ಚುಡಾಯಿಸಿದ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪುಂಡಾಟಿಕೆ ನಡೆಸುವ ವ್ಯಕ್ತಿಗಳ ಮೇಲೆ ರೌಡಿಶೀಟರ್ ಕೇಸ್ ದಾಖಲಿಸುವ ಮೂಲಕ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಡಾ. ಚೇತನ್ ಸಿಂಗ್ ರಾಥೋಡ್ ಹೇಳಿದರು.
ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಗಣೇಶ ಕಾಲೋನಿಯಲ್ಲಿ ಪೊಲೀಸ್ ಇಲಾಖೆ ಹಾಗೂ ನಾಗರಿಕರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ರೀತಿಯ ಅಪರಾಧ ಪ್ರಕರಣಗಳ ತಡೆಗೆ ಹಾಗೂ ಅಪರಾಧಿಗಳ ಪತ್ತೆಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಪೊಲೀಸರೊಂದಿಗೆ ಜನರು ಸಹಾಯ ಹಸ್ತ ಚಾಚಿದಾಗಲೇ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹಗಲು ವೇಳೆ ಸೇರಿ ಮನೆಗಳ್ಳತನದ ಪ್ರಕರಣಗಳು ಹೆಚ್ಚಾಗಿವೆ. ಮಹಿಳೆಯರ ಕೊರಳಲ್ಲಿನ ಸರಗಳ ಅಪಹರಣ, ಅಗ್ಗದ ಧರಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ನೀಡುವ, ಸೆಲ್ಫೋನ್ಗೆ ಎಸ್ಎಂಎಸ್ ಮಾಡಿ ನೀವು ಲಕ್ಷಾಂತರ ರು. ಹಣ ಗೆದ್ದಿದ್ದೀರಿ ಎಂದು ವಂಚನೆ ಮಾಡುವ ಬಗ್ಗೆ ಎಚ್ಚರದಿಂದಿರುವಂತೆ, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರೊಂದಿಗೆ ನಾಗರೀಕರು ಸಹಕಾರ ನೀಡುವುದು ಅತ್ಯಗತ್ಯ ಎಂದು ತಿಳಿಸಿದರು.
ನಂತರ ನಾಗರೀಕರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು. ನಗರ ಡಿವೈಎಸ್ಪಿ ಮುರುಗಣ್ಣನವರ್, ಗಾಂಧಿನಗರ ಠಾಣೆ ಪಿಐ ಜಯಕುಮಾರ್, ನಾಗರಿಕರ ಸಂಘದ ಟಪಾಲ್ ಗಣೇಶ್, ಬಳ್ಳಾರಿ ಮೀಡಿಯಾ ಕ್ಲಬ್ ಅಧ್ಯಕ್ಷ ಮಧುಸೂದನ್ ಕಾಡ್ಲೂರ್, ಕೃಷ್ಣ, ನೂರಾರು ನಾಗರಿಕರು ಇದ್ದರು.