ತುಂಗಭದ್ರೆ ತಟದಲ್ಲಿದ್ದರೂ ನೀರಿಗೆ ತತ್ವಾರ!
ಹೂವಿನಹಡಗಲಿ: ಮಲ್ಲಿಗೆನಾಡು ಹೂವಿನಹಡಗಲಿಯಲ್ಲಿ ನಿತ್ಯ ಬೆಳಗಾದರೆ ಸಾಕು ಎಲ್ಲರಿಗೂ ಕುಡಿಯುವ ನೀರಿನ ಚಿಂತೆ, ಪಕ್ಕದಲ್ಲೇ ತುಂಗಭದ್ರೆ ತುಂಬಿ ಹರಿಯುತ್ತಿದ್ದರೂ ಕುಡಿಯುವ ನೀರಿನ ಸಮಸ್ಯೆಯಿಂದ ಮಾತ್ರ ಜನ ಮುಕ್ತರಾಗಿಲ್ಲ.
ಹೌದು, ತುಂಗಭದ್ರೆ ನದಿ ತಟದಲ್ಲಿ ಹೂವಿನಹಡಗಲಿ ಪಟ್ಟಣವಿದ್ದರೂ ಕುಡಿಯುವ ನೀರಿಗೆ ತತ್ವಾರ ಇದ್ದೇ ಇದೆ. ವಾರಕ್ಕೊಮ್ಮೆ ನೀರು ಬಿಡುವ ಪುರಸಭೆ ಸಿಬ್ಬಂದಿಯು ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ನಿತ್ಯ ಜನರ ಪುರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕುಡಿವ ನೀರಿನ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಪುರಸಭೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಇನ್ನು ಮುಂದೆ ಪಟ್ಟಣದ ಜನತೆಗೆ 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಭರವಸೆ ನೀಡಿದ್ದರು. ಆದರೆ ಎರಡು ದಿನ ಮಾತ್ರ ಸಚಿವರ ಸೂಚನೆ ಮೇರೆಗೆ ಪುರಸಭೆ ಸಿಬ್ಬಂದಿ ನೀರು ಪೂರೈಕೆ ಮಾಡಿದ್ದರು. ಆದರೆ ಈಗ ವಾರಕ್ಕೊಮ್ಮೆ ನೀರು ಸಮರ್ಪಕ ರೀತಿಯಲ್ಲಿ ಪೂರೈಕೆಯಾಗದೆ ಸಾರ್ವಜನಿಕರ ನಿತ್ಯ ನೀರಿನ ಗೋಳು ಕೇಳುವವರೇ ಇಲ್ಲದಂತಾಗಿದೆ.
ವಾರಕ್ಕೊಮ್ಮೆ ನೀರು: ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಈ ದಿನಗಳಲ್ಲಿ ವಾರಕ್ಕೆ ಒಮ್ಮೆ, ಐದಾರು ದಿನಗಳಿಗೊಮ್ಮೆ ಅಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಲಕ್ಷಾಂತರ ಜನಸಂಖ್ಯೆ ಹೊಂದಿರುವ ಹೊಸಪೇಟೆಯಂತಹ ದೊಡ್ಡ ನಗರದಲ್ಲಿ ಪ್ರತಿದಿನವೂ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಬರೀ 30 ಸಾವಿರ ಜನಸಂಖ್ಯೆಯಷ್ಟಿರುವ ಹೂವಿನಹಡಗಲಿಯ ಜನತೆ ವಾರಕ್ಕೊಮ್ಮೆ ಕುಡಿಯುವ ನೀರು ಕಾಣಬೇಕಾಗಿದೆ.
ಎಂ.ಪಿ. ಪ್ರಕಾಶ್ ಅವರು 1998ರಲ್ಲಿ ಮುಂದಿನ 25 ವರ್ಷಗಳ ಜನಸಂಖ್ಯೆಯ ಅಂದಾಜು ಆಧರಿಸಿ ನದಿ ನೀರು ಪೂರೈಕೆ ಯೋಜನೆ ಅನುಷ್ಠಾನಗೊಳಿಸಿದ್ದರು. ಆದರೆ ನಿರ್ವಹಣೆಯಲ್ಲಿನ ನ್ಯೂನತೆ ಹಾಗೂ ನಿರ್ಲಕ್ಷ್ಯದಿಂದ ಪಟ್ಟಣದ ಜನತೆಗೆ ಕುಡಿಯುವ ನೀರಿನ ದಾಹ ನೀಗಿಸಲು ಸಾಧ್ಯವಾಗದ ಸ್ಥಿತಿಗೆ ಬಂದು ತಲುಪಿದೆ. ಈ ಹಿಂದೆ ಪೈಪ್‌ಲೈನ್ ಲಿಕೇಜ್ ಹೆಸರಿನಲ್ಲಿಯೇ ಪುರಸಭೆಯಲ್ಲಿ ಸಾಕಷ್ಟು ಹಣ ಖರ್ಚು ಮಾಡಲಾಗಿದೆ, ಆದರೆ ಸಮರ್ಪಕ ನೀರಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.
ನಿತ್ಯ ನೀರು ಬಿಡಲು ಯತ್ನ: ನೀರಿನ ನಿರ್ವಹಣೆಯಲ್ಲಿ ಸ್ವಲ್ಪ ಮಟ್ಟಿನ ತೊಂದರೆ ಉಂಟಾಗಿದೆ. ಈಗ ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ಕಾಯಕ ನಗರ, ಎಂ.ಪಿ. ಪ್ರಕಾಶ ನಗರಗಳಿಗೂ ನೀರಿನ ಪೈಪ್‌ಲೈನ್ ಅಳವಡಿಸಿ ನೀರು ಪೂರೈಕೆಯಾಗುತ್ತಿದೆ. ಆಗಿರುವ ತೊಂದರೆಯನ್ನು ಸರಿಪಡಿಸಿಕೊಂಡು 3 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲು ನಿತ್ಯ ಶ್ರಮಿಸುತ್ತಿದ್ದೇವೆ ಎನ್ನುತ್ತಾರೆ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಾಗರಾಜ.
ನದಿಯಲ್ಲಿ ಜಾಕ್‌ವಾಲ್ವ್ ಬಳಿ ಹಾಕಲಾಗಿರುವ ಮೋಟಾರ್‌ಗಳು ಹಳೆಯದಾಗಿವೆ. ಇದರಿಂದಾಗಿ ನೀರೆತ್ತುವ ಪ್ರಮಾಣ ಕಡಿಮೆಯಾಗಿದೆ. ಪೂರ್ಣ ಪ್ರಮಾಣದ ವಿದ್ಯುತ್ ಇದ್ದರೂ ನೀರಿನ ಟ್ಯಾಂಕ್‌ಗಳು ತುಂಬುತ್ತಿಲ್ಲ ಎನ್ನುತ್ತಾರೆ ನಾಗರಾಜ್. ಅದೇನೆ ಇದ್ದರೂ ಪಕ್ಕದಲ್ಲಿ ಜೀವನಾಡಿ ಹರಿಯುತ್ತಿದ್ದರೂ ಪಟ್ಟಣದ ಜನತೆಗೆ ಕುಡಿಯುವ ನೀರಿನ ಬವಣೆ ಮಾತ್ರ ತಪ್ಪಿಲ್ಲ.
--