ರೆಡ್ಡಿ ಬಳಗ ಮಣಿಸಲು ಕೈ ಹೊಸ ಅಸ್ತ್ರ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 26
ರೆಡ್ಡಿ ಸಹೋದರರು ಮತ್ತು ಶ್ರೀರಾಮುಲು ಅವರನ್ನು ರಾಜಕೀಯವಾಗಿ ಮಣಿಸಲು ಇದೀಗ ಕಾಂಗ್ರೆಸ್ ಅಸ್ತ್ರ ಹೂಡಲು ಮುಂದಾಗಿದೆ.
ಜಿಲ್ಲಾ ಪಂಚಾಯಿತಿಯಲ್ಲಿನ ಕಾಂಗ್ರೆಸ್ ಸದಸ್ಯರನ್ನು ಶ್ರೀರಾಮುಲು ನೇತೃತ್ವದ ಬಿಎಸ್ಸಾರ್ ಪಕ್ಷ ತನ್ನತ್ತ ಸೆಳೆಯುವ ಭೀತಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಬೆಂಬಲಿತ 16 ಸದಸ್ಯರು ಹೊರ ರಾಜ್ಯ ಪ್ರವಾಸ ಕೈಕೊಂಡಿದ್ದು, ಆ. 28ರಂದು ಪ್ರವಾಸದಿಂದ ನೇರವಾಗಿ ಜಿಪಂನಲ್ಲಿ ನಡೆಯುವ ಅವಿಶ್ವಾಸ ಮಂಡನೆಯ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತ್ತ ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರ ಪಡೆಯುವ ತಂತ್ರಕ್ಕೆ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡುವ ಮೂಲಕ ಪ್ರತಿತಂತ್ರ ಹೂಡಲು ಸಿದ್ಧತೆ ನಡೆಸಿದೆ.
ಆಪರೇಷನ್ ಕಮಲದ ಮೂಲಕ ಎಲ್ಲರನ್ನು ಮಣಿಸುತ್ತಿದ್ದ ರೆಡ್ಡಿ ಸಹೋದರರು, ಶ್ರೀರಾಮುಲು ಅವರು ಎಲ್ಲಿ ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್ ಸದಸ್ಯರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಾರೆ ಎಂಬ ಭೀತಿಯಲ್ಲಿ ಕಾಂಗ್ರೆಸ್ನ ಸದಸ್ಯರು ತಮಿಳುನಾಡು, ಪಾಂಡಿಚೇರಿ ಸೇರಿದಂತೆ ವಿವಿಧ ಕಡೆಗೆ ಪ್ರವಾಸ ಹೋಗಿ, ಭಾನುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. 16 ಸದಸ್ಯರು ಪ್ರವಾಸ ಕೈಗೊಂಡಿದ್ದು, ಇನ್ನುಳಿದ ಕಾಂಗ್ರೆಸ್ನ ಇಬ್ಬರು ಸದಸ್ಯರಾದ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್, ತಿಪ್ಪಿಬಾಯಿ ಠಾಕ್ರಾನಾಯ್ಕ ಅವರು ಸೋಮವಾರ ಬೆಂಗಳೂರಿಗೆ ತೆರಳಲಿದ್ದಾರೆ. ಆ ಮೂಲಕ ಜಿಪಂನಲ್ಲಿ ಕಾಂಗ್ರೆಸ್ ಬಲ 18ಕ್ಕೆ ಏರಲಿದೆ. ಅತ್ತ ವಿಪ್ ಜಾರಿಯಾದರೆ ಕಾಂಗ್ರೆಸ್ಗೆ ಬೆಂಬಲ ನೀಡ ಬಯಸಿರುವ ಬಿಜೆಪಿ ಸದಸ್ಯರಿಗೆ ಆತಂಕ ಉಂಟಾಗಿದೆ.
ಕುಸಿಯುತ್ತಿರುವ ರಾಜಕೀಯ ಬಲ
ಜಿಲ್ಲೆಯ 9 ವಿಧಾನಸಭಾ ಕ್ಷೇತ್ರದಲ್ಲಿ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಬೆಂಬಲಿತ 8 ಶಾಸಕರು ಕಳೆದ ಬಾರಿ ಇದ್ದರು. ಆದರೆ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 8ರಿಂದ ಆ ಸಂಖ್ಯೆ ಕೇವಲ 2ಕ್ಕೆ ಇಳಿದಿದೆ. ಇದರಿಂದಾಗಿ ಶ್ರೀರಾಮುಲು ಅವರ ರಾಜಕೀಯ ಪ್ರಾಬಲ್ಯ ಜಿಲ್ಲೆಯಲ್ಲಿ ಕುಂದಿತ್ತು. ಇನ್ನು ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ತೀವ್ರ ಮುಖಭಂಗ ಅನುಭವಿಸಿದ್ದರು. ಪಾಲಿಕೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವ ಮೂಲಕ ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಪ್ರಾಬಲ್ಯಕ್ಕೆ ಧಕ್ಕೆಯಾಯಿತು. ಸ್ಥಳೀಯ ಸಂಸ್ಥೆಗಳಲ್ಲಿ ಪ್ರಾಬಲ್ಯ ಕುಂದಿತು. ಇದೀಗ ಜಿಪಂನ ಸರದಿಯಾಗಿದ್ದು, ಕಾಂಗ್ರೆಸ್ ಪಕ್ಷ ಜಿಪಂನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ಮುಂದಾಗಿದೆ.
ಬಿಜೆಪಿ-ಬಿಎಸ್ಸಾರ್ ಒಂದೇ: 35 ಸದಸ್ಯ ಬಲ ಹೊಂದಿರುವ ಬಳ್ಳಾರಿ ಜಿಪಂನಲ್ಲಿ ಬಿಎಸ್ಸಾರ್ ಹಾಗೂ ಬಿಜೆಪಿ ಬೇರ್ಪಟ್ಟಿದ್ದವು. ಇದರಿಂದಾಗಿ ಕಾಂಗ್ರೆಸ್ ಬಲಗೊಳ್ಳುವಂತಾಗಿತ್ತು. ಆದರೆ ಇದೀಗ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡುವ ಮೂಲಕ ಬಹಿರಂಗವಾಗಿಯೇ ಪ್ರಥಮ ಬಾರಿಗೆ ಬಿಜೆಪಿ ಹಾಗೂ ಬಿಎಸ್ಸಾರ್ ಒಗ್ಗಟ್ಟು ಸಾಧಿಸಲು ಮುಂದಾಗಿರುವುದು ಭವಿಷ್ಯದಲ್ಲಿ ಬಿಜೆಪಿ ಬಿಎಸ್ಸಾರ್ ಹೊಂದಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಜೆಪಿಯ ಕೆಲ ಸದಸ್ಯರು ಕಾಂಗ್ರೆಸ್ಗೆ ಬೆಂಬಲ ನೀಡುತ್ತಾರೆ ಎಂಬ ಮಾತಿತ್ತು. ಹೀಗಾಗಿ ಬಿಜೆಪಿ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡುವುದರಿಂದ ಸದಸ್ಯತ್ವ ಕಳೆದುಕೊಳ್ಳುವ ಭೀತಿ ಬೆಂಬಲ ನೀಡಲಿದ್ದ ಸದಸ್ಯರಿಗೆ ಇದೆ. ಇದಕ್ಕೆ ಕಾಂಗ್ರೆಸ್ನ ಪ್ರತಿತಂತ್ರ ಏನೆಂಬುದು ಕುತೂಹಲ ಕೆರಳಿಸಿದೆ. ಬಿಜೆಪಿ ವಿಪ್ನಿಂದ ಕಾಂಗ್ರೆಸ್ಗೆ ಸರಳ ಬಹುಮತ ಅಷ್ಟು ಸುಲಭವಲ್ಲ. ಕಾಂಗ್ರೆಸ್ನಲ್ಲಿನ ಬಿಜೆಪಿ ಸದಸ್ಯರು ಗಟ್ಟಿಮನಸ್ಸು ಮಾಡಿದರೆ ಮಾತ್ರ ಕಾಂಗ್ರೆಸ್ಗೆ ಅಧಿಕಾರದ ಚುಕ್ಕಾಣಿ ಸಿಗಲು ಸಾಧ್ಯ.
ಬಿಜೆಪಿಯ ಕೆಲ ಸದಸ್ಯರು, ಜೆಡಿಎಸ್ನ ಒಬ್ಬ ಸದಸ್ಯ ಸೇರಿ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು 18 (ಕಾಂಗ್ರೆಸ್ನ 16)ಕ್ಕೆ ತಂದಿದೆ. ಭೀಮಾನಾಯ್ಕ ಶಾಸಕರಾಗಿ ಆಯ್ಕೆಯಾದ ನಂತರ ಜಿಪಂ ಸಂಖ್ಯಾಬಲ 35ಕ್ಕೆ ಇಳಿದಿದೆ. ಹೀಗಾಗಿ ಸರಳ ಬಹುಮತಕ್ಕೆ 18 ಸದಸ್ಯರು ಸಾಕು. ಆದರೆ ಬಿಜೆಪಿ ವಿಪ್ ಜಾರಿ ಮಾಡುವುದರಿಂದ ಕಾಂಗ್ರೆಸ್ನಲ್ಲಿ ಗುರುತಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಸದಸ್ಯರು ಏನು ಮಾಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಬಿಜೆಪಿಯ ಓರ್ವ ಸದಸ್ಯ ಬೆಂಬಲ ನೀಡಿದರೆ ಮಾತ್ರ ಕಾಂಗ್ರೆಸ್ ಸಂಖ್ಯಾಬಲ 18ಕ್ಕೇರುತ್ತದೆ. ಇಲ್ಲದಿದ್ದರೆ 17ಕ್ಕೆ ಇಳಿಯುತ್ತದೆ. ಆಗ ಅವಿಶ್ವಾಸ ಮಂಡನೆ ಕಷ್ಟ. ಕಾಂಗ್ರೆಸ್ ಅಧಿಕಾರ ಪಡೆಯುವಲ್ಲಿ ಸಫಲವಾದರೆ, ಹೊಳಲು ಕ್ಷೇತ್ರದ ಬೆಂಡಿಗೇರಿ ಶೋಭಾ ಅಧ್ಯಕ್ಷೆಯಾಗಲಿದ್ದು, ಉಪಾಧ್ಯಕ್ಷರಾಗಿ ಮಮತಾ ಸುರೇಶ್ ಮುಂದುವರೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ಶಶಿಧರ ಮೇಟಿ