ಅನುದಾನ ಬಳಕೆಗೆ ಉದಾಸೀನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 27
ಇಡೀ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಅನುದಾನ ಬಳಕೆ ಮಾಡಿದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗುವವರು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಹಿಂದಿನ ಶಾಸಕ ಎಂ.ಎಸ್. ಸೋಮಲಿಂಗಪ್ಪ. ಜಿಲ್ಲೆಯ ಬತ್ತದ ಕಣಜವಾಗಿರುವ ಕ್ಷೇತ್ರಕ್ಕೆ ಬಂದ ಅನುದಾನ ಬಳಕೆಯಾಗದೇ ಉಳಿದಿರುವುದು ಕ್ಷೇತ್ರದ ಜನತೆಯ ದೌರ್ಭಾಗ್ಯ.
ಇವರು ತಮ್ಮ ಅನುದಾನ ಬಳಸಿಕೊಳ್ಳುವಲ್ಲಿ ಎಷ್ಟು ಉದಾಸೀನತೆ ತೋರಿದ್ದಾರೆ ಎಂದರೆ 2012-13ನೇ ಸಾಲಿನಲ್ಲಿ ಬಂದ ರು. 50 ಲಕ್ಷ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನೂ ಯಾವುದೇ ಕಾಮಗಾರಿಗೆ ಬಳಕೆ ಮಾಡಿಕೊಂಡಿಲ್ಲ. ಐದು ವರ್ಷದಲ್ಲಿ ಬಂದ ರು. 4.5 ಕೋಟಿ ಅನುದಾನದಲ್ಲಿ ಕೇವಲ ರು. 2.25 ಕೋಟಿ ಬಳಸಿಕೊಂಡಿದ್ದು, ರು. 224.71 ಲಕ್ಷ ಉಳಿದಿದೆ. 2008-09ನೇ ಸಾಲಿನ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿದ್ದು ಬಿಟ್ಟರೆ, ಇನ್ನುಳಿದ ನಾಲ್ಕು ವರ್ಷಗಳ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳದಿರುವುದು ಇವರ ಹೆಗ್ಗಳಿಕೆ.
2012-13ರಲ್ಲಿ ಶೂನ್ಯ ಬಳಕೆ: ಜಿಲ್ಲೆಯ ಶಾಸಕರಿಗೆ ಅನುದಾನದ ಶೀಘ್ರಗತಿಯ ಬಳಕೆಗೆ ನಿರುತ್ಸಾಹ ಹೆಚ್ಚಾಗಿ ಕಾಣುತ್ತಿದೆ. ಪ್ರತಿಯೊಬ್ಬ ಹಿಂದಿನ ಶಾಸಕರಲ್ಲೂ ಇಂತಹ ಉದಾಸೀನತೆ ಕಾಣುತ್ತದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನ ಬಳಕೆ ಮಾಡದಷ್ಟು ಶಾಸಕರು ಬ್ಯುಸಿಯಾಗಿದ್ದಾರೆಯೇ? ಜನರು ಅಭಿವೃದ್ಧಿಯಾಗಿಲ್ಲ, ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಶಾಸಕರಲ್ಲಿ ಮಾತ್ರ ಅಂತಹ ಅನುದಾನ ಅಗತ್ಯ ಇರುವ ಕಡೆಗಳಲ್ಲಿ ಶೀಘ್ರದಲ್ಲಿಯೇ ಬಳಕೆ ಮಾಡಿ, ಜನರ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಮನೋಭಾವ ಇಲ್ಲದಾಗಿದೆ. 2012-13ರಲ್ಲಿ ರು. 50 ಲಕ್ಷ ಅನುದಾನ ಬಿಡುಗಡೆಯಾದರೂ ಅದರಲ್ಲಿ ಒಂದು ಪೈಸೆಯನ್ನೂ ಖರ್ಚು ಮಾಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
5 ವರ್ಷದಲ್ಲಿ ಕೇವಲ ರು. 2.25 ಕೋಟಿ ಬಳಕೆ: ಸಿರುಗುಪ್ಪ ಕ್ಷೇತ್ರದ ಹಿಂದಿನ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರಿಗೆ 2008-09ರಿಂದ 2012-13ರ ವರೆಗೆ ಸುಮಾರು ರು. 450 ಲಕ್ಷ ಅನುದಾನ ಮಂಜೂರಾಗಿದ್ದರೆ ಅದರಲ್ಲಿ ಅರ್ಧದಷ್ಟು ಅಂದರೆ ರು. 225.29 ಲಕ್ಷ ಮಾತ್ರ ಬಳಕೆಯಾಗಿದೆ. 2008-09ರಲ್ಲಿ ರು. 150 ಲಕ್ಷ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಂಡಿದ್ದಾರೆ. 2009-10ನೇ ಸಾಲಿನಲ್ಲಿ ರು. 50 ಲಕ್ಷ ಮಂಜೂರು ಮಾಡಿದ್ದು, ಅದರಲ್ಲಿ ಕೇವಲ ರು. 15.19 ಲಕ್ಷ ಬಳಕೆ ಮಾಡಲಾಗಿದೆ. 2010-11ನೇ ಸಾಲಿನಲ್ಲಿ ಬಂದ ರು. 100 ಲಕ್ಷ ಅನುದಾನದಲ್ಲಿ ರು. 47.53 ಲಕ್ಷ ಬಳಕೆ ಮಾಡಿದ್ದು, ಇನ್ನು ರು. 52.47 ಲಕ್ಷ ಬಳಕೆಯಾಗಿಲ್ಲ. 2011-12ರಲ್ಲಿ ರು. 100 ಲಕ್ಷದಲ್ಲಿ ಕೇವಲ ರು. 12.57 ಲಕ್ಷ ಬಳಕೆ ಮಾಡಿ ಇನ್ನು ರು. 87.43 ಲಕ್ಷ ಬಳಕೆ ಮಾಡದೆ ಉಳಿಸಿದ್ದಾರೆ.
ಸಮುದಾಯ ಭವನ, ರಸ್ತೆಗೆ ಆದ್ಯತೆ: ಶಾಸಕರು ತಮ್ಮ ಐದು ವರ್ಷಗಳ ಅವಧಿಯಲ್ಲಿ ಬಂದ ಅನುನುದಾನಲ್ಲಿ ರು. 342.43 ಲಕ್ಷ ರಸ್ತೆ ಮತ್ತು ಸಮುದಾಯ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಈ ಕ್ಷೇತ್ರದಲ್ಲಿ ಹೆಚ್ಚಾಗಿ ರಸ್ತೆ, ಸಮುದಾಯ ಭವನಗಳು ಅಭಿವೃದ್ಧಿಯಾಗಿರುವಂತೆ ಕಾಣುತ್ತದೆ. ಸಮುದಾಯ ಭವನಕ್ಕೆ ಒಟ್ಟಾರೆ ಅನುದಾನದಲ್ಲಿ ರು. 174.73 ಲಕ್ಷ ನೀಡಿದ್ದಾರೆ. 2008-09ರಲ್ಲಿ ರು. 19 ಲಕ್ಷ, 2009-10ರಲ್ಲಿ ರು. 25 ಲಕ್ಷ, 2010-11ರಲ್ಲಿ ರು. 56.38 ಲಕ್ಷ, 2011-12ರಲ್ಲಿ ರು. 53.35 ಲಕ್ಷ, 2012-13ರಲ್ಲಿ ರು. 21 ಲಕ್ಷ ಸಮುದಾಯ ಭವನಕ್ಕೆ ಮೀಸಲಿಟ್ಟಿದ್ದಾರೆ. ಇನ್ನು ರಸ್ತೆಗೆ ಐದು ವರ್ಷಗಳ ಅವಧಿಯಲ್ಲಿ ರು. 167.70 ಲಕ್ಷ ಮೀಸಲು ಇಡಲಾಗಿದೆ. 2008-09ರಲ್ಲಿ ರು. 94 ಲಕ್ಷ, 2009-10ರಲ್ಲಿ ರು. 4.36 ಲಕ್ಷ, 2011-12ರಲ್ಲಿ ರು. 42.88 ಲಕ್ಷ, 2012-13ರಲ್ಲಿ ರು. 14.58 ಲಕ್ಷ ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ.
ಶಾಸಕರ ಅನುದಾನ ಹಂಚಿಕೆ: ಸಿರುಗುಪ್ಪ ಕ್ಷೇತ್ರದ ಹಿಂದಿನ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ತಮ್ಮ ಐದು ವರ್ಷಗಳ ಅನುದಾನವನ್ನು 12 ಕ್ಷೇತ್ರಕ್ಕೆ ಹಂಚಿಕೆ ಮಾಡಿದ್ದಾರೆ. ಸೇತುವೆಗೆ ರು. 5 ಲಕ್ಷ, ಬಸ್ ತಂಗುದಾಣಕ್ಕೆ ರು. 5 ಲಕ್ಷ, ಚರಂಡಿ ನಿರ್ಮಾಣಕ್ಕೆ ರು. 38 ಲಕ್ಷ, ರಂಗಮಂದಿರಕ್ಕೆ ರು. 5.45 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 31.32 ಲಕ್ಷ, ಶಾಲೆಗಳ ಕೊಠಡಿ ನಿರ್ಮಾಣ, ಕಾಂಪೌಂಡ್ ಮತ್ತು ಮೈದಾನ ಅಭಿವೃದ್ಧಿಗೆ ರು. 1.5 ಲಕ್ಷ, ಆರೋಗ್ಯ ಇಲಾಖೆಗೆ ರು. 5 ಲಕ್ಷ, ಉದ್ಯಾನವನದ ಅಭಿವೃದ್ಧಿಗೆ ರು. 2 ಲಕ್ಷ, ಗ್ರಂಥಾಲಯದ ಅಭಿವೃದ್ಧಿಗೆ ರು. 2 ಲಕ್ಷ, ಇತರೆ ಕಾಮಗಾರಿಗೆ ರು. 2 ಲಕ್ಷ ಅನುದಾನ ಹಂಚಿಕೆ ಮಾಡಿದ್ದಾರೆ.
ಅನುದಾನ ಬಳಕೆ ಅಗತ್ಯ: ಶಾಸಕರು ಅಗತ್ಯ ಇರುವ ಕಡೆಗಳಲ್ಲಿ ಅನುದಾನ ಹಂಚಿಕೆ ಮಾಡುವುದು ಅಗತ್ಯವಾಗಿದೆ. ಕೇವಲ ಅನುದಾನಕ್ಕೆ ಕಾಮಗಾರಿಗಳನ್ನು ಗುರುತಿಸಿಕೊಟ್ಟರೆ ಸಾಲದು, ಕಾಮಗಾರಿ ನಿರ್ವಹಣೆಗೆ ಯಾರು ಜವಾಬ್ದಾರಿ ವಹಿಸಿಕೊಳ್ಳುತ್ತಾರೆಯೋ ಅವರ ಮೇಲೆ ಶಾಸಕರು ನಿಗಾವಹಿಸಿ, ಅಧಿಕಾರಿಗಳನ್ನು ಬೆನ್ನಟ್ಟಿದರೆ ಮಾತ್ರ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡು, ಅನುದಾನ ಬಳಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತಿಯೊಬ್ಬ ಶಾಸಕ ಕಾರ್ಯೋನ್ಮುಖರಾಗಬೇಕಾಗಿದೆ. ಅಧಿಕಾರಿಗಳು ಕಾಮಗಾರಿಯ ಎಸ್ಟಿಮೇಟ್ ಬೇಗನೆ ನೀಡುವುದಿಲ್ಲ ಎಂಬ ಆರೋಪವಿದೆ. ಈ ನಿಟ್ಟಿನಲ್ಲಿ ಶಾಸಕರೇ ಮುತುವರ್ಜಿ ವಹಿಸಿ, ಅಂತಹ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಬಹುದಲ್ಲವೇ?
ಶಶಿಧರ ಮೇಟಿ