ಮತ್ತೆ ಮಹಿಳೆಗೆ ಪಪಂ ಮೀಸಲು
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 27
ಅಂತೂ ಇಂತು ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ಪ್ರಕಟಿಸಿದೆ. ಗೆದ್ದು ಐದು ತಿಂಗಳಾದರೂ ಅಧಿಕಾರದ ಗದ್ದುಗೆ ಏರದ ಇಲ್ಲಿನ ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಈಗ ಆಸೆ ಚಿಗುರೊಡೆದಂತಾಗಿದೆ. ಆದರೆ ಕಳೆದ ಐದು ವರ್ಷ ಅಧ್ಯಕ್ಷ ಸ್ಥಾನವನ್ನು ಮಹಿಳೆಯರು ಅಲಂಕರಿಸಿದ್ದರೂ, ಈ ಬಾರಿ ಸಹ ಅಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿರುವುದೇ ಈಗ ಪುರುಷ ಸದಸ್ಯರಿಗೆ ಫಜೀತಿಯಾಗಿದೆ.
ಕಳೆದ ಐದು ವರ್ಷಗಳಲ್ಲಿ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ ಮಹಿಳೆಯರೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು, ಆದರೆ ಈ ಬಾರಿಯೂ ಅಧ್ಯಕ್ಷ ಸ್ಥಾನ ಬಿಸಿಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸಾಮಾನ್ಯ (ಮಹಿಳೆ)ಗೆ ಮೀಸಲಾಗಿದ್ದರಿಂದ ಪುರುಷ ಸದಸ್ಯರಿಗೆ ಇರುಸು ಮುರುಸಾಗಿದೆ. ಪಪಂ ಆಡಳಿತಾವಧಿಯಲ್ಲಿ ಈ ಹಿಂದೆಯು ಅನೇಕ ಬಾರಿ ಮಹಿಳೆಯರಿಗೆ ಅಧ್ಯಕ್ಷ ಗಾದಿ ಒಲಿದಿರುವ ಉದಾಹರಣೆಗಳು ಸಾಕಷ್ಟು. ಆದರೆ ಈ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷ ಎರಡೂ ಸ್ಥಾನ ಮಹಿಳೆಯರಿಗೆ ಸಿಕ್ಕಿರಲಿಲ್ಲ. ಕಳೆದ ಬಾರಿ ಅಧ್ಯಕ್ಷ ಸ್ಥಾನ ಮಾತ್ರ ಎಸ್ಸಿ ಮಹಿಳೆಗೆ ಮೀಸಲಾಗಿತ್ತು. ನಂತರ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಹೀಗಾಗಿ ಅಂಜಿನಮ್ಮ ಅಂಜಿನಪ್ಪ, ಸೌಭಾಗ್ಯಮ್ಮ ಕೊತ್ಲಪ್ಪ, ಖೈರೂನ್ಬಿ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಈ ಬಾರಿಯೂ ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾಗಿದ್ದು, ಪುರುಷ ಸದಸ್ಯರಿಗೆ ನುಂಗಲಾರದ ತುತ್ತಾಗಿದೆ.
7 ಮಹಿಳಾ ಸದಸ್ಯರು: 20 ಸದಸ್ಯ ಬಲವಿರುವ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯಲ್ಲಿ 7 ಮಹಿಳಾ ಸದಸ್ಯರಿದ್ದಾರೆ. ಅದರಲ್ಲಿ 7ನೇ ವಾರ್ಡ್ನ ಎ.ಎಂ. ಲೀಲಾವತಿ, 4ನೇ ವಾರ್ಡ್ನ ಕೋಲೆ ಮೈಮೂನ್ ಮಾತ್ರ ಬಿಸಿಎ ವರ್ಗಕ್ಕೆ ಸೇರಿದ್ದು, ಇಬ್ಬರ ಮಧ್ಯೆ ಅಧ್ಯಕ್ಷ ಗಾದಿಗಾಗಿ ಪೈಪೋಟಿ ಏರ್ಪಡುವುದು ಸಹಜ. ಅಲ್ಲದೆ ಒಬ್ಬ ಪಕ್ಷೇತರ ಬಿಸಿಎ ಮಹಿಳೆ ಸಹ ಶಾಸಕ ಬಿ. ನಾಗೇಂದ್ರ ಅವರಿಗೆ ಬೆಂಬಲ ಸೂಚಿಸಿದ್ದರಿಂದ ಈ ಮಹಿಳೆ ಸಹ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಬಹುದು. ಇನ್ನು ಉಪಾಧ್ಯಕ್ಷ ಸ್ಥಾನದ ಮೇಲೆ ಉಳಿದ ಮಹಿಳಾ ಸದಸ್ಯರು ನಾವೂ ಒಂದು ಕೈ ನೋಡೇ ಬಿಡೋಣ ಎನ್ನುವ ಲೆಕ್ಕಾಚಾರದಲ್ಲಿದ್ದಾರೆ.
ಶಾಸಕ ಪಡೆಗೆ ಪಪಂ?: ಶಾಸಕ ಬಿ. ನಾಗೇಂದ್ರ ಬೆಂಬಲಿತ ಪಕ್ಷೇತರ 10 ಸದಸ್ಯರು, ಕಾಂಗ್ರೆಸ್ನ 5, ಬಿಎಸ್ಸಾರ್ 2, ಜೆಡಿಎಸ್ 1 ಹಾಗೂ ಕಾಂಗ್ರೆಸ್ ಬಂಡಾಯದ 2 ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದಾರೆ. ಸರಳ ಬಹುಮತಕ್ಕೆ ಶಾಸಕ ಬೆಂಬಲಿತ ಸದಸ್ಯ ಪಡೆಗೆ ಒಬ್ಬ ಅಭ್ಯರ್ಥಿ ಅನಿವಾರ್ಯತೆಯಿದೆ. ಅದಕ್ಕಾಗಿ, ಚುನಾವಣೆ ಸಂದರ್ಭದಲ್ಲೇ ಜೆಡಿಎಸ್ ಅಭ್ಯರ್ಥಿಗೆ ಶಾಸಕರ ಬೆಂಬಲ ಇತ್ತೆಂಬುದು ಗುಟ್ಟಾಗಿ ಉಳಿದಿಲ್ಲ. ಇದರಿಂದ ಜೆಡಿಎಸ್ ಅಭ್ಯರ್ಥಿ ಶಾಸಕರಿಗೆ ಬೆಂಬಲ ಸೂಚಿಸುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಇದಲ್ಲದೆ, ಇನ್ನುಳಿದ ಪಕ್ಷೇತರ ಸದಸ್ಯರು ಇರುವುದರಿಂದ ಯಾರಾದರೂ ಸರಿ ಶಾಸಕರಿಗೆ ಬೆಂಬಲ ಸೂಚಿಸಿ, ವಾರ್ಡ್ನ ಅಭಿವೃದ್ಧಿಗೆ ಹೆಚ್ಚಿನ ಪಾಲು ಪಡೆಯುವ ತವಕದಲ್ಲಿದ್ದಾರೆ ಎಂಬ ವಾದಗಳಿಗೆ ರೆಕ್ಕೆಪುಕ್ಕ ಬಂದಿವೆ. ಏನೇ ಆದರೂ, ಶಾಸಕ ಪಡೆಗೆ ಪಟ್ಟಣ ಪಂಚಾಯ್ತಿ ಅಧಿಕಾರ ದಕ್ಕುವ ಸಾಧ್ಯತೆ ಹೆಚ್ಚಾಗಿವೆ.
ಕೈ ರಣತಂತ್ರ: ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಎಂದರೆ ಹತ್ತು ಹಲವು ವರ್ಷಗಳಿಂದ ಕಾಂಗ್ರೆಸ್ ತೆಕ್ಕೆಯಲ್ಲೇ ಇತ್ತು. ಆದರೆ, ಈ ಬಾರಿ ಮಾತ್ರ ಬಹುಮತ ಇಲ್ಲದಂತಾಗಿದೆ. ಇರುವ 5 ಸದಸ್ಯ ಬಲದಿಂದ ಕೆಲವರನ್ನು ಸೆಳೆದು ಅಧಿಕಾರದ ಚುಕ್ಕಾಣಿ ಹಿಡಿಯಲು ಸ್ಥಳೀಯ ಕಾಂಗ್ರೆಸ್ ಮುಖಂಡರು ರಣತಂತ್ರ ರೂಪಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕಾಗಿ ತೆರೆಮರೆ ಕಸರತ್ತು ಆರಂಭವಾಗಿದೆ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್ ಸದಸ್ಯರ ಪೈಕಿ ಬಿಸಿಎ ಮೀಸಲು ಹೊಂದಿದ ಮಹಿಳೆಯರಿಲ್ಲ. ಬಿಎಸ್ಸಾರ್ ಮತ್ತು ಬಂಡಾಯ ಕಾಂಗ್ರೆಸ್ನಿಂದ ಪಕ್ಷೇತರರಾಗಿ ಆಯ್ಕೆಯಾಗಿರುವ ಇಬ್ಬರು ಸದಸ್ಯರ ನಡೆ ಏನೆಂಬುದು ನಿಗೂಢ.
ಈಗ ಅಧ್ಯಕ್ಷ ಗಾದಿಗೆ ಇಬ್ಬರು ಮಹಿಳಾ ಸದಸ್ಯರಲ್ಲಿ ಯಾರಿಗೆ ಹೆಚ್ಚು ಒಲವು ಎಂಬ ಚರ್ಚೆ ಶುರುವಾಗಿದೆ. ಅದಕ್ಕಾಗಿ ಆಕಾಂಕ್ಷಿಗಳಿಂದ ಸದಸ್ಯರ ಮನವೊಲಿಕೆ ಯತ್ನಗಳು ತೆರೆಮರೆಯಲ್ಲಿ ಚಾಲ್ತಿ ಪಡೆದಿವೆ. ಒಂದು ವೇಳೆ ಯಾರಿಂದ ಉತ್ತಮ ಆಡಳಿತ, ಸದಸ್ಯರ ಸಮಸ್ಯೆಗಳಿಗೆ ಸ್ಪಂದನೆ ಸಿಗಲಿವೆ ಎಂಬ ಲೆಕ್ಕಾಚಾರ ಅನೇಕ ಸದಸ್ಯರದ್ದಾಗಿದೆ. ಇದಲ್ಲದೆ, ಸ್ಥಾಯಿ ಸಮಿತಿ ಮೇಲೆ ಕಣ್ಣಿಟ್ಟಿರುವ ಸದಸ್ಯರು ಯಾರತ್ತ ದೃಷ್ಟಿ ನೆಡುತ್ತಾರೆಂಬುದು ಕುತೂಹಲ. ಶಾಸಕರ ಸೂಚನೆಗೆ ತಾವು ಬದ್ಧ ಎಂಬ ಮಾತುಗಳು ಬೆಂಬಲಿತ ಪಡೆಯ ಸದಸ್ಯರಿಂದ ವ್ಯಕ್ತವಾಗುತ್ತಿದೆ. ಕೊನೆಗೆ ರಾಜಕೀಯ ಮೇಲಾಟಗಳಲ್ಲಿ ಯಾರಿಗೆ ದಕ್ಕಲಿದೆ ಅಧಿಕಾರ ಎಂಬುದು ಮಾತ್ರ ಕಾದು ನೋಡಬೇಕಿದೆ. ಶಾಸಕ ನಾಗೇಂದ್ರ ಸಹ ಈ ಬಗ್ಗೆ ಹೆಚ್ಚಿನ ಗಮನಹರಿಸಿದ್ದು, ಯಾರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ಸೂಕ್ತ ಎಂಬುದುನ್ನು ಸದಸ್ಯರು ಹಾಗೂ ಮುಖಂಡರ ಅಭಿಪ್ರಾಯ ಪಡೆಯುತ್ತಿದ್ದಾರೆ.
ಭೀಮಣ್ಣ ಗಜಾಪುರ