ರೆಡ್ಡಿ ರಿಲೀಸ್ಗೆ ಚಂಡಿಕಾ ಹೋಮ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ.27-
ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಎದುರಾಗಿರುವ ಸಂಕಷ್ಟಗಳನ್ನು ದೂರ ಮಾಡಲು ಹಾಗೂ ಬಂಧಮುಕ್ತರನ್ನಾಗಿ ಮಾಡುವಂತೆ ಪ್ರಾರ್ಥಿಸಿ, ರೆಡ್ಡಿ ಕುಟುಂಬ ಸದಸ್ಯರು ಚಂಡಿಕಾ ಹೋಮ ನಡೆಸುತ್ತಿದ್ದಾರೆ.
ಜನಾರ್ದನ ರೆಡ್ಡಿ ಬಂಧಿಸಿದಾಗ ಮನೆಯ ಗೇಟನ್ನು ಮುಚ್ಚಿಸಿದರು. ವಾಸ್ತುದೋಷದ ಹಿನ್ನೆಲೆಯಲ್ಲಿ ರೆಡ್ಡಿ ರಾಜಕೀಯ ಚಟುವಟಿಕೆಗಳ ತಾಣವಾಗಿದ್ದ 'ಕುಟೀರಾ' ನೆಲಸಮವಾಯಿತು. ಜನಾರ್ದನ ರೆಡ್ಡಿ ನಿವಾಸದಲ್ಲೇ ಹಲವು ಹೋಮ, ಹವನ, ಪೂಜಾ ಕಾರ್ಯಕ್ರಮಗಳು ಕೈಗೊಂಡಿದ್ದರೂ, ಸಂಕಷ್ಟಗಳು ಹೆಚ್ಚಾದವು. ಆದರೀಗ ಬೆಳಗಲ್ ರಸ್ತೆಯ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ ರೆಡ್ಡಿ ಕುಟುಂಬದ ಸದಸ್ಯರು ಮಂಗಳವಾರದಿಂದ ಮೂರು ದಿನಗಳ ಚಂಡಿಕಾ ಹೋಮಕ್ಕೆ ಚಾಲನೆ ನೀಡಿದ್ದಾರೆ. ಆಂಧ್ರಪ್ರದೇಶ ಮತ್ತು ಬೆಂಗಳೂರು ಮೂಲದ 70 ಅರ್ಚಕರು ಈ ಹೋಮ ನಡೆಸುತ್ತಿದ್ದಾರೆ. ಆರ್ಚಕರೊಬ್ಬರ ಸಲಹೆ ಮೇರೆಗೆ ಈ ಹೋಮ ಮಾಡಲಾಗುತ್ತಿದೆ ಎನ್ನಲಾಗಿದೆ.
ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ, ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಸೇರಿದಂತೆ ರೆಡ್ಡಿ ಕುಟುಂಬದ ಸುಮಾರು 10ಕ್ಕೂ ಹೆಚ್ಚು ಸದಸ್ಯರು ಹೋಮ ಹವನದಲ್ಲಿ ಪಾಲ್ಗೊಂಡಿದ್ದರು. ಚಂಡಿಕಾ ಹೋಮ, ಪೂಜಾ ವಿಧಿ ವಿಧಾನಗಳು ಪೂರ್ಣಗೊಂಡ ನಂತರ ಮನೆಗೆ ತೆರಳಿ ಅಲ್ಲಿಯೂ ಜನಾರ್ದನ ರೆಡ್ಡಿ ಬಂಧಮುಕ್ತಿಗಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು ಎನ್ನಲಾಗಿದೆ.
ಹೋಮಕ್ಕೆ ಕಾರಣ?: ರೆಡ್ಡಿ ಬಂಧನದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ಬೇಸತ್ತು ಹೋಗಿದೆ. ಜನಾರ್ದನ ರೆಡ್ಡಿ ಅನುಪಸ್ಥಿತಿಯಲ್ಲಿ ಕುಟುಂಬ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಒಎಂಸಿಗೆ ಸಂಬಂಧಿಸಿದಂತೆ 884 ಕೋಟಿ ಆಂಧ್ರಪ್ರದೇಶದಲ್ಲಿನ ಆಸ್ತಿ ಮುಟ್ಟುಗೋಲು ಹಾಕಲಾಯಿತು. ರಾಜ್ಯದಲ್ಲಿಯೂ ಬೇಲೆಕೇರಿ, ಎಎಂಸಿಗೆ ಸಂಬಂಧಿಸಿದಂತೆ ಆಸ್ತಿ ಮುಟ್ಟುಗೋಲಿಗೆ ಜಾರಿ ನಿರ್ದೇಶನಾಲಯ ಸಿದ್ಧತೆ ನಡೆಸುತ್ತಿದೆ. ಈ ಬೆಳವಣಿಗೆಯಿಂದ ಹೊರ ಬರಲು ಕುಟುಂಬದವರು ಜನಾರ್ದನ ರೆಡ್ಡಿ ಬಂಧನ ಮುಕ್ತಿಗಾಗಿ ಹೋಮ ಹವನದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.