ಸಭೆ ಕರೆದವರೇ ದೂರ ಉಳಿದರು
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಆ. 27
ಸಮೀಪದ ಚಿರಿಬಿ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವಕ್ಕೆ ಚಾಲನೆ ದೊರಕಿಸುವ ಹೆಸರಿನಲ್ಲಿ ಪೂರ್ವ ತಯಾರಿ ಇಲ್ಲದೇ ಕರೆಯಲಾಗಿದ್ದ ಸಭೆ ಮಂಗಳವಾರ ನಡೆಯಲೇ ಇಲ್ಲ. ಸಭೆ ಕರೆದಿದ್ದವರೇ ಈ ಪ್ರಕ್ರಿಯೆಯಿಂದ ದೂರ ಸರಿದು ಮುಂದಿನ ಬಾರಿ ಪ್ರಯತ್ನಿಸೋಣ ಎಂದು ಕೈಚೆಲ್ಲಿ ಕುಳಿತ ಪ್ರಸಂಗ ನಡೆದಿದೆ.
ಸಭೆ ನಡೆಯದ ಬಗ್ಗೆ ಆಯೋಜಕರಲ್ಲಿ ಒಬ್ಬರಾದ ಡಾ. ಬಿ.ಸಿ. ಮೂಗಪ್ಪ ಅವರನ್ನು ಸಂಪರ್ಕಿಸಿದರೆ, ಚಿರಿಬಿ ಮೂಗಬಸವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯುವ ಬಗ್ಗೆ ವಿವಾದ ಕೋರ್ಟ್‌ನಲ್ಲಿದೆ. ಈ ಹಂತದಲ್ಲಿ ಸಭೆ ನಡೆಸುವುದು ಸರಿಯಲ್ಲ ಎಂದು ಜನಪ್ರತಿನಿಧಿಗಳು ಸೋಮವಾರ ಸಂಜೆ ತಮಗೆ ತಿಳಿಸಿದ್ದರಿಂದ ಸಭೆ ನಡೆಸಲು ಮುಂದಾಗಲಿಲ್ಲ ಎಂದು ಹೇಳಿ ಸರ್ಕಾರದಿಂದ ತಮ್ಮ ಬೇಡಿಕೆಗೆ ಸರಿಯಾದ ಪ್ರೋತ್ಸಾಹ, ಬೆಂಬಲ ದೊರಕಲಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಸುಳ್ಳಾಯಿತು: ಜಾತ್ರಾ ಮಹೋತ್ಸವ ನಡೆಸಬೇಕೆಂಬುದು ತಮ್ಮ ವೈಯಕ್ತಿಕ ಹಂಬಲವೇನಲ್ಲ, ಇದು ಸಹಸ್ರಾರು ಭಕ್ತರ ಕೋರಿಕೆ ವಿಷಯ. ಕೇವಲ ಚಿರಿಬಿ ಮತ್ತು ರಾಂಪುರ ಗ್ರಾಮಸ್ಥರ ವಿವಾದಕ್ಕಾಗಿ ರಥೋತ್ಸವ ನಡೆಸುವುದನ್ನು ಸ್ಥಗಿತಗೊಳಿಸಿರವುದು ಸರಿಯಲ್ಲ. ಇಬ್ಬರನ್ನು ಹೊರಗಿಟ್ಟು ರಥೋತ್ಸವಕ್ಕೆ ಮತ್ತೆ ಚಾಲನೆ ದೊರಕಿಸಿಕೊಡುವತ್ತ ಜನಪ್ರತಿನಿಧಿಗಳು ಮುಂದಾಗುತ್ತಾರೆಂಬ ವಿಶ್ವಾಸ ತಾವು ಹೊಂದಿದ್ದು, ವಿಶ್ವಾಸ ಸುಳ್ಳಾಯಿತು ಎಂದು ಹೇಳಿದರು.
ಚಿರಿಬಿ ಮೂಗಬಸವೇಶ್ವರ ಸ್ವಾಮಿ ರಥೋತ್ಸವದ ಗೊಂದಲ ಮುಂದಿನ ವರ್ಷಕ್ಕಾದರೂ ಮುಕ್ತಾಯ ಕಾಣಬೇಕಿದೆ. ಮುಂದಿನ ವರ್ಷದ ವೇಳೆಗೆ ರಥೋತ್ಸವಕ್ಕೆ ಚಾಲನೆ ದೊರಕಿಸಿಕೊಡುವ ನಿಟ್ಟಿನತ್ತ ಸರ್ಕಾರದ ಮೇಲೆ ಮತ್ತೆ ಒತ್ತಡ ಹೇರಲು ತೊಡಗಿಸಿಕೊಳ್ಳುವೆ ಎಂದು ಮೂಗಪ್ಪ ತಿಳಿಸಿದರು.
3-4 ತಿಂಗಳ ಹಿಂದೆ ಕರೆಯಬಹುದಿತ್ತು: ಅವಸರವಸರವಾಗಿ ಭಕ್ತರ ಸಭೆ ಕರೆದದ್ದು ಸರಿಯಲ್ಲ. ವಿವಾದ ಕೋರ್ಟ್ ಮೆಟ್ಟಿಲೇರಿದೆ. ಈ ಹಂತದಲ್ಲಿ ಜನಪ್ರತಿನಿಧಿಯಾಗಲಿ, ಸರ್ಕಾರವಾಗಲಿ ಯಾವುದೇ ನಿರ್ಧಾರ ಕೈಗೊಳ್ಳುವುದು ಸಮಂಜಸವಾಗಲಾರದು. ಮೂಗಪ್ಪ ಅವರಿಗೆ ನಿಜಕ್ಕೂ ರಥೋತ್ಸವ ಜರುಗಬೇಕೆಂಬ ಪ್ರಾಮಾಣಿಕ ಕಾಳಜಿ ಇದ್ದರೆ ರಥೋತ್ಸವ ಜರುಗುವ ಒಂದು ವಾರದ ಮುಂಚೆ ಸಭೆ ಕರೆಯದೆ, 3-4 ತಿಂಗಳ ಹಿಂದೆ ಕರೆಯಬಹುದಿತ್ತು ಎಂದು ಜೆಡಿಎಸ್ ಮುಖಂಡ ಎಂ.ಎಂ.ಜೆ. ಹರ್ಷವರ್ಧನ್ ಪ್ರತಿಕ್ರಿಯಿಸಿದರು.
ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನಿಲುಗಡೆಗೊಂಡಿರುವುದು ಭಕ್ತರಿಗೆ ನಿರಾಸೆ ತಂದಿರುವುದು ನಿಜ. ಆದರೆ ಕೋರ್ಟ್‌ನಂತಹ ಸೂಕ್ಷ್ಮ ವಿಷಯದಲ್ಲಿ ಪ್ರತಿ ಹೆಜ್ಜೆಯನ್ನು ಸರಿಯಾದ ರೀತಿಯಲ್ಲಿ ಇಡಬೇಕಿದೆ. ಶಾಸಕ ಭೀಮಾನಾಯ್ಕ ಈ ಕಾರಣಕ್ಕಾಗಿಯೇ ಸಭೆಯಲ್ಲಿ ಪಾಲ್ಗೊಳ್ಳಲು ಮುಂದಾಗಲಿಲ್ಲ. ಮುಂದಿನ ಬಾರಿ ರಥೋತ್ಸವ ಜರುಗಲು ಉಭಯ ಗ್ರಾಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಸೇರಿದಂತೆ ಎಲ್ಲರ ಸಹಕಾರ ಪಡೆಯುವ ಪ್ರಯತ್ನ ಮಾಡುತ್ತೇವೆ. ಅನಗತ್ಯವಾಗಿ ಗೊಂದಲ ಎಬ್ಬಿಸುವುದು ಸರಿಯಲ್ಲ ಎಂದು ಹೇಳಿದರು.