ಸುದ್ದಿ ಸಂಕ್ಷೇಪ
ಇಂದು ಗೋಕುಲಾಷ್ಟಮಿ
ಹೊಸಪೇಟೆ: ಪಟೇಲ್ ನಗರದಲ್ಲಿರುವ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಆ. 28 ಮತ್ತು 29ರಂದು ಶ್ರೀಕೃಷ್ಣಾಷ್ಟಮಿ ನಡೆಯಲಿದೆ. ಆ. 28ರಂದು ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿಗೆ ನಿರ್ಮಾಲ್ಯ ವಿಸರ್ಜನೆ, ಪುಣ್ಯಾಹವಾಚನ, ಫಲ ಪಂಚಾಮೃತ ಅಭಿಷೇಕ, ಕಳಸಾರಾಧನೆ, ವಿಶೇಷ ಅಲಂಕಾರ, ತುಳಿಸಿ ಅರ್ಚನೆ, ಮಹಾ ಮಂಗಳಾರತಿ ಸೇರಿದಂತೆ ಇತರೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ. ಸಂಜೆ ವೇದ ಪಾರಾಯಣ, ಲಕ್ಷ್ಮಿ ಸಹಸ್ರನಾಮರ್ಚನೆ, ಉಯ್ಯಾಲೆ ಸೇವೆ, ಪುಷ್ಪಯಾಗ, ಪ್ರಕಾರೋತ್ಸವ, ನಂದಗೋಕಲ ಪ್ರವೇಶ ನಡೆಯಲಿವೆ. ಮಧ್ಯರಾತ್ರಿ 12ಕ್ಕೆ ಉತ್ಸವ ಮೂರ್ತಿಗೆ ಅಭಿಷೇಕ, ನಾಮಕರಣ, ಕ್ಷೀರ ತರ್ಪಣ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಆ. 29ರಂದು ಗೋಕುಲಾಷ್ಟಮಿ ಅಂಗವಾಗಿ ವಿಶೇಷ ಕಾರ್ಯಕ್ರಮ ಚಿಕ್ಕಮಕ್ಕಳಿಗೆ ಕೃಷ್ಣ, ರಾಧೆ, ರುಕ್ಮಣಿ ವೇಷ ಧರಿಸುವ ಸ್ಪರ್ಧೆ ನಡೆಯಲಿದೆ. ಸಂಜೆ 6ಕ್ಕೆ ಗಡಿಗೆ ಒಡೆಯುವ ಸ್ಪರ್ಧೆ ನಡೆಯಲಿದೆ. ಇದರ ಅನಂತರ ರಂಗಿನಾಟ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಬಿ.ಎಸ್. ಸುಬ್ಬರಾಜ್ ಸಿಂಗ್ ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿ ಶವ ಪತ್ತೆ
ಬಳ್ಳಾರಿ: ಅಪರಿಚಿತ ವ್ಯಕ್ತಿಯ ಶವವೊಂದು ನಗರದ ರೇಲ್ವೆ ನಿಲ್ದಾಣ ಆಟೋ ಸ್ಟ್ಯಾಂಡ್ ಬಳಿ ಆ. 26ರಂದು ಮಧ್ಯಾಹ್ನ 2.30ರ ಸುಮಾರಿಗೆ ಪತ್ತೆಯಾಗಿದೆ. ಮೃತನು ಅಂದಾಜು 55ರಿಂದ 60 ವರ್ಷ ವಯಸ್ಸುಳ್ಳವನಾಗಿದ್ದಾನೆ. ಅಂದಾಜು 5.7 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ, ತಲೆಯಲ್ಲಿ ಕಪ್ಪು ಕೂದಲು, ಬಿಳಿ ಗಡ್ಡ ಹೊಂದಿದ್ದಾನೆ. ಈತನ ಸಂಬಂಧಿಕರು ಯಾರಾದರೂ ಇದ್ದಲ್ಲಿ ಕೂಡಲೇ ದೂರವಾಣಿ ಸಂಖ್ಯೆ 08392-272192 ಅಥವಾ ಕಂಟ್ರೋಲ್ ರೂಂ 08392-258100ಗೆ ತಿಳಿಸಬೇಕೆಂದು ಎಂದು ಗಾಂಧಿನಗರ ಠಾಣೆಯ ಪಿಎಸ್ಐ ಕೋರಿದ್ದಾರೆ.
ಚನ್ನಬಸವನಗೌಡ ನಿಧನ
ಬಳ್ಳಾರಿ: ತಾಲೂಕಿನ ಬೇವಿನಹಳ್ಳಿ ಗ್ರಾಮದ ನಿವಾಸಿ ನಿವೃತ್ತ ಪೊಲೀಸ್ ಜಮಾದಾರ ಕಡೇಮನೆ ಚನ್ನಬಸವನಗೌಡ (63) ಭಾನುವಾರ ರಾತ್ರಿ ನಿಧನರಾದರು. ಮೃತರಿಗೆ ಪತ್ನಿ ಹಾಗೂ ನಾಲ್ವರು ಸಹೋದರರು, ಮೂವರು ಸಹೋದರಿಯರು, ನಾಲ್ವರು ಪುತ್ರರು ಹಾಗೂ ಮೊಮ್ಮಕ್ಕಳು ಇದ್ದಾರೆ. ಬಳ್ಳಾರಿ, ಹಡಗಲಿ, ಇಟಗಿ, ಹಲವಾಗಲು, ಹರಪ್ಪನಹಳ್ಳಿ ಹಾಗೂ ಗುಡೇಕೋಟೆ ಪೊಲೀಸ್ ಠಾಣೆಗಳಲ್ಲಿ 26 ವರ್ಷ ಸೇವೆ ಸಲ್ಲಿಸಿ ಸ್ವಯಂನಿವೃತ್ತಿ ಹೊಂದಿದ್ದರು.