ಸುದ್ದಿ ಸಂಕ್ಷೇಪ
ಮಟ್ಕಾ: ಓರ್ವನ ಬಂಧನ
ಬಳ್ಳಾರಿ: ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಜೂಜಾಟದ ಅಡ್ಡೆ ಮೇಲೆ ಕಂಪ್ಲಿ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ಆತನಿಂದ ರು. 5,235 ವಶಪಡಿಸಿಕೊಂಡಿದ್ದಾರೆ. ಮಂಗಳವಾರ ಸಂಜೆ ಕಂಪ್ಲಿ ಪಟ್ಟಣದ ಮಾರುತಿ ನಗರದ ಆಂಜನೇಯ ದೇವಸ್ಥಾನ ಸಮೀಪದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಕಂಪ್ಲಿ ಪೊಲೀಸರು ದಾಳಿ, ಮಾಡಿ ಲಕ್ಷ್ಮಣ ಎಂಬಾತನನ್ನು ಬಂಧಿಸಿದ್ದಾರೆ. ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಅಡ್ಡೆ ಮೇಲೆ ದಾಳಿ
ಬಳ್ಳಾರಿ: ಅಂದರ್ ಬಾಹರ್ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ಹಚ್ಚೊಳ್ಳಿ ಪೊಲೀಸರು ದಾಳಿ ಮಾಡಿ, ಆರೋಪಿಗಳಿಂದ ರು. 7,990 ವಶಪಡಿಸಿಕೊಂಡಿದ್ದಾರೆ. ಸಿರುಗುಪ್ಪ ತಾಲೂಕು ಹಚ್ಚೊಳ್ಳಿ ಗ್ರಾಮದಲ್ಲಿ ಮಂಗಳವಾರ ಸಮುದಾಯ ಭವನ ಸಮೀಪದಲ್ಲಿ ಇಸ್ಪೀಟ್ ಆಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಆರೋಪಿತರನ್ನು ಬಂಧಿಸಿ, ಬಂಧಿತರಿಂದ ರು. 7,990 ವಶಪಡಿಸಿಕೊಂಡಿದ್ದು, ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀಗ ಮುರಿದು ಕಳ್ಳತನ
ಬಳ್ಳಾರಿ:ಮನೆಯ ಬೀಗ ಮುರಿದು ಮನೆಯ ಬೀರುದಲ್ಲಿದ್ದ ರು. 1.45 ಲಕ್ಷ ಮೌಲ್ಯದ ಬಂಗಾರದ ಆಭರಣಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಕಂಪ್ಲಿಯಲ್ಲಿ ನಡೆದಿದೆ. ಕಂಪ್ಲಿ ಪಟ್ಟಣದಲ್ಲಿ ಮನೆಯವರು ಮನೆ ಬೀಗ ಹಾಕಿಕೊಂಡು ಜಗಳೂರು ತಾಲೂಕಿನ ಕೊಡದಗುಡ್ಡ ವೀರಭದ್ರೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ. ಸಿದ್ದಮ್ಮ ನಿಧನ
ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯ ಕೆ. ಸಿದ್ದಮ್ಮ (80) ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರು ಹಿರಿಯ ರಂಗ ಕಲಾವಿದೆ ಕೆ. ನಾಗರತ್ನಮ್ಮ ಅವರ ತಾಯಿ. ಪುತ್ರ ಕೆ. ರಾಮಚಂದ್ರಪ್ಪ ಹಾಗೂ ನಾಗರತ್ನಮ್ಮ ಸೇರಿ ಐವರು ಪುತ್ರಿಯರು, ಮೊಮ್ಮಕ್ಕಳು ಇದ್ದಾರೆ. ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ, ಮರಿಯಮ್ಮನಹಳ್ಳಿಯ ಲಲಿತ ಕಲಾರಂಗ, ಮಾರುತಿ ಕಲಾರಂಗ, ಸೃಷ್ಠಿ ಕಲಾ ಬಳಗ, ನಾಟ್ಯ ಕಲಾರಂಗ, ಮಾತಾ ಮಂಜಮ್ಮ ಜೋಗತಿ ತಂಡ ದವರು ಸಂತಾಪ ಸೂಚಿಸಿದ್ದಾರೆ.