ಕೋಮು ಸೌಹಾರ್ದ ಪ್ರಮಾಣ ವಚನ
ಹೊಸಪೇಟೆ: ರಾಷ್ಟ್ರದ ಸ್ವಾತಂತ್ರ್ಯ, ಏಕತೆ ಸಂರಕ್ಷಿಸಲು ಮತ್ತು ಬಲಪಡಿಸಲು ಅರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತೇನೆಂದು ನಾನು ಶ್ರದ್ಧಾಪೂರ್ವಕವಾಗಿ ಪ್ರಮಾಣ ಮಾಡುತ್ತೇನೆ. ಅಲ್ಲದೆ ನಾನು ಎಂದಿಗೂ ಹಿಂಸಾಚಾರದಲ್ಲಿ ತೊಡಗುವುದಿಲ್ಲವೆಂದು ಮತ್ತು ಮತ, ಭಾಷೆ, ಪ್ರದೇಶ ಅಥವಾ ಇತರ ರಾಜಕೀಯ ಅಥವಾ ಆರ್ಥಿಕ ಕುಂದು ಕೊರತೆಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಶಾಂತಿಯುತವಾಗಿ ಹಾಗೂ ಸಂವಿಧಾನಾತ್ಮಕ ರೀತಿಯಲ್ಲಿ ಬಗೆಹರಿಸಿಕೊಳ್ಳುವ ದಿಸೆಯಲ್ಲಿ ನನ್ನ ಪ್ರಯತ್ನ ಮುಂದುವರೆಸುತ್ತೇನೆಂದೂ ಪ್ರಮಾಣ ಮಾಡುತ್ತೇನೆ.
ಹೀಗೆ ನೆರೆದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ರಾಷ್ಟ್ರದ ಆಗು ಹೋಗುಗಳ ಕುರಿತು ಕೋಮು ಸೌಹಾರ್ದದ ಪ್ರಮಾಣ ಬೋಧಿಸಿದವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ. ಅವರು ಕನ್ನಡ ವಿಶ್ವವಿದ್ಯಾಲಯದ ಪಂಪ ಸಭಾಂಗಣದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಏಕತಾ ಸಂದೇಶ ನೀಡಿದರು.
ದೇಶದ ಎಲ್ಲ ಜನರಲ್ಲಿ ಏಕತೆಯನ್ನು ಉತ್ತೇಜಿಸಿ ಎಲ್ಲರಲ್ಲೂ ಸದ್ಭಾವನೆಯನ್ನು ಮೂಡಿಸಿ ಪರಸ್ಪರ ಸೌಹಾರ್ದ ಮತ್ತು ಪ್ರೀತಿಯಿಂದ ಎಲ್ಲರೂ ಕೂಡಿ ಬಾಳಲು ಕೇಂದ್ರ ಸರ್ಕಾರ ಕೋಮು ಸೌಹಾರ್ದ ಪಾಕ್ಷಿಕವನ್ನಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕೋಮು ಸೌಹಾರ್ದದ ಪ್ರಮಾಣ ವಚನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ಸಮನ್ವಯಾಧಿಕಾರಿ ಡಾ.ಸಿ.ಟಿ. ಗುರುಪ್ರಸಾದ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.