ಗೃಹ ಮಂಡಳಿ ನಿವೇಶನ ಹಂಚಲಿ
ಬಳ್ಳಾರಿ: ನಿವೇಶನ ಹಾಗೂ ಮನೆಗಳಾಗಿ ಕರ್ನಾಟಕ ರಾಜ್ಯ ಗೃಹ ಮಂಡಳಿಗೆ ಅರ್ಜಿ ಸಲ್ಲಿಸಿ ವರ್ಷಗಳೇ ಗತಿಸಿದರೂ, ಇನ್ನು ಕರ್ನಾಟಕ ರಾಜ್ಯ ಗೃಹ ಮಂಡಳಿಯವರು ನಿವೇಶನ ಹಂಚಿಕೆ ಮಾಡಲು ಮುಂದಾಗಿಲ್ಲ. ಮುಂದಿನ ದಿನಗಳಲ್ಲಿ ಮಂಡಳಿಯ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ಮುಳಗಾಂ ಗೃಹ ಮಂಡಳಿ ಕ್ರಮ ಖಂಡಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 2006ರಿಂದ 2009ರ ವರೆಗೆ ಸಾರ್ವಜನಿಕರಿಂದ ಸುಮಾರು 15 ಸಾವಿರ ಅರ್ಜಿಗಳನ್ನು ಸ್ವೀಕರಿಸಿದ್ದಾರೆ. ಅರ್ಜಿದಾರರಿಂದ ಗೃಹ ಮಂಡಳಿಯು ರು. 16 ಕೋಟಿ ಸಂಗ್ರಹಿಸಿದೆ. ಆದರೆ ಈವರೆಗೆ ಮಂಡಳಿಯ ನಿವೇಶನ ಹಂಚಿಕೆ ಮಾಡಿಲ್ಲ, ಅಲ್ಲದೆ ಈಗಾಗಲೇ ಮಂಡಳಿಯು ನಿರ್ಮಿಸಿದ ವಾರ್ಡ್ಗಳಲ್ಲಿ ಮೂಲ ಸೌಲಭ್ಯಗಳನ್ನು ಕಲ್ಪಿಸಿಲ್ಲ, ಈ ಬಗ್ಗೆ ಮಂಡಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುತ್ತದೆ ಎಂದರು.
ಗೃಹ ಮಂಡಳಿ ಈ ವಿಳಂಬ ಧೋರಣೆ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ, ನಿರ್ಲಕ್ಷ್ಯದ ಉತ್ತರ ನೀಡುತ್ತಾರೆ ಎಂದು ಮಂಡಳಿ ಧೋರಣೆ ಖಂಡಿಸಿದ ಅವರು, ಇನ್ನು ನಗರದ ಈದ್ಗಾ ಮೈದಾನ ಸಮೀಪದಲ್ಲಿ ಕಳೆದ 20 ವರ್ಷಗಳ ಹಿಂದೆ ಸರ್ಕಾರ ನಿರ್ಮಿಸಿ ಕೊಟ್ಟಿರುವ ಬಿಡಿ ಕಾರ್ಮಿಕರ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಿಲ್ಲ. ಇನ್ನು ಅಲ್ಲಿನ ಕೆಲ ಮನೆಗಳನ್ನು ದುರಸ್ತಿ ಮಾಡಿಸಿಲ್ಲ, ಮಳೆಗಾಲದಲ್ಲಿ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಿ, ಜನರ ಸಮಸ್ಯೆಗಳನ್ನು ಪರಿಹರಿಸಬೇಕೆಂದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ ಪಿ. ಸುಬ್ರಹ್ಮಣ್ಯ ರೆಡ್ಡಿ, ರಾಜಶೇಖರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಡಿ. ಅಜಮ್ ಬಾಷಾ, ವೇದಿಕೆ ಜಿಲ್ಲಾಧ್ಯಕ್ಷ ಸೈಯ್ಯದ್ ಇಲಿಯಾಸ್, ಬಸವರಾಜ್ ಉಪನಾಳ ಸೇರಿದಂತೆ ಇತರರು ಇದ್ದರು.