ದೇವದಾಸಿಯರು ಮುಂದೆ ಬರಲಿ
ಹೂವಿನಹಡಗಲಿ: ಸಮಾಜಕ್ಕೆ ಅಂಟಿಕೊಂಡಿರುವ ಅನಿಷ್ಟ ದೇವದಾಸಿ ಪದ್ಧತಿಯಿಂದ ಮಹಿಳೆಯರು ವಿಮೋಚನೆ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಸಿಡಿಪಿಓ ಎ.ಎಂ. ಅಸ್ತೀರ್ ಕರೆ ನೀಡಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಮತ್ತು ದೇವದಾಸಿ ಪುನರ್ವಸತಿ ಯೋಜನೆ ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ದೇವದಾಸಿಯರಿಗೆ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವದಾಸಿ ಪದ್ಧತಿ ನಿರ್ಮೂಲನೆಗಾಗಿ ಎಲ್ಲರೂ ಶ್ರಮಿಸಬೇಕಿದೆ, ಈ ಪದ್ಧತಿಗೆ ಕಡಿವಾಣ ಹಾಕುವಲ್ಲಿ ಇಲಾಖೆಯ ಜತೆಗೆ ಸಹಕರಿಸುವಂತೆ ಮನವಿ ಮಾಡುತ್ತಾ, ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿಗೆ ನೂಕುವ ಪ್ರಕರಣಗಳು ನಡೆದರೆ ಇಲಾಖೆಯ ಗಮನಕ್ಕೆ ತರಬೇಕು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು. ಯಾವುದೇ ಸಂದರ್ಭದಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆ ಇಲಾಖೆಯನ್ನು ಸಂಪರ್ಕಿಸಿದರೆ ಮಹಿಳಾ ಸಾಂತ್ವನ ಸಹಾಯವಾಣಿ ಮೂಲಕ ಸ್ಪಂದಿಸುವುದಾಗಿ ತಿಳಿಸಿದರು.
ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಗೋಪಾಲನಾಯ್ಕ ಮಾತನಾಡುತ್ತಾ, ಹಳ್ಳಿಗಳಲ್ಲಿ ಇನ್ನೂ ಜೀವಂತವಿರುವ ಮುತ್ತು ಕಟ್ಟುವ ಪದ್ಧತಿ ಅಮಾಯಕ ಹೆಣ್ಣು ಮಕ್ಕಳ ಬದುಕನ್ನೇ ಕಸಿದುಕೊಂಡತೆ. ಈ ಪದ್ಧತಿಯಿಂದ ವಿಮೋಚನೆ ಹೊಂದಿದ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳಿಗೆ ನಿಗಮದಿಂದ ಸಾಲ ಸೌಲಭ್ಯ ಕಲ್ಪಿಸಿಕೊಡುತ್ತಿದೆ. ಸ್ವ ಸಹಾಯ ಸಂಘಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಎಂದರು.
ವಕೀಲರಾದ ಎಂ.ಪಿ.ಎಂ. ರಾಜೇಶ್ವರಿ, ಸುಜಾತ ಮಹಿಳಾ ಪರ ಕಾನೂನುಗಳ ಕುರಿತು ವಿವರಿಸಿ, ದೇವದಾಸಿಯಂತಹ ಹೀನ ಪದ್ಧತಿಯಿಂದ ದೂರವಿದ್ದು, ತಮ್ಮ ಮಕ್ಕಳನ್ನು ಅಕ್ಷರವಂತರನ್ನಾಗಿ ಮಾಡಬೇಕು. ಬಾಲ್ಯ ವಿವಾಹ, ದೇವದಾಸಿ ಮತ್ತು ಬಾಲಕಾರ್ಮಿಕ ಪದ್ಧತಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಗಳಿವೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆಯ ರಾಮನಗೌಡ, ಹೊಸಪೇಟೆ ಪಿಐಒ ವಿಶ್ವನಾಥ, ಸಿರುಗುಪ್ಪ ಪಿಐಒ ನಾಗರಾಜ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ 530ಕ್ಕೂ ದೇವದಾಸಿಯರು ಭಾಗವಹಿಸಿದ್ದರು. ತಾಲೂಕು ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಎ.ಜಿ. ಹಾಲನಗೌಡ ಸ್ವಾಗತಿಸಿದರು. ಸುರೇಶ ಮಾಗಳ ನಿರ್ವಹಿಸಿದರು.