ಸುದ್ದಿ ಸಂಕ್ಷೇಪ
ಸೆ. 4ರಿಂದ ಸಂದರ್ಶನ
ಬಳ್ಳಾರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಉದ್ಯೋಗಿನಿ ಯೋಜನೆಯಡಿ ಫಲಾಭವಿಗಳನ್ನು ಗುರುತಿಸಲು ಸಂದರ್ಶನ ದಿನಾಂಕ ನಿಗದಿಪಡಿಸಿದ್ದು, ಸೆ. 4ರಂದು ಕೂಡ್ಲಿಗಿ, 5ರಂದು ಹೊಸಪೇಟೆ, 6ರಂದು ಸಿರುಗುಪ್ಪ, 7ರಂದು ಸಂಡೂರು, 10ರಂದು ಬಳ್ಳಾರಿ ನಗರ, 11ರಂದು ಬಳ್ಳಾರಿ ಗ್ರಾಮಾಂತರ, 12ರಂದು ಹೂವಿನಹಡಗಲಿ, ಹಾಗೂ 13ರಂದು ಹಗರಿಬೊಮ್ಮನಹಳ್ಳಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ಏರ್ಪಡಿಸಿದೆ. ಫಲಾನುಭವಿಗಳು ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ತಿಳಿಸಿದ್ದಾರೆ.
ದೇವಿ ಮಹೋತ್ಸವ
ಹಗರಿಬೊಮ್ಮನಹಳ್ಳಿ: ಇಲ್ಲಿನ ರಾಮನಗರದ ನರೆಗಲ್ ದುರುಗಮ್ಮ ದೇವಿ ಮಹೋತ್ಸವ ಮಂಗಳವಾರ ಅತ್ಯಂತ ಸಡಗರ, ಸಂಭ್ರಮದೊಂದಿಗೆ ನೇರವೇರಿತು. ಮಹೋತ್ಸವದ ಅಂಗವಾಗಿ ಅಲಂಕೃತ ಪಲ್ಲಕ್ಕಿಯಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಿ ಸಕಲ ವಾದ್ಯ ಪರಿಕರಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ತಾಲೂಕಿನ ಅಡವಿ ಆನಂದದೇವನಹಳ್ಳಿ ಗ್ರಾಮದ ಬಳಿಯ ತುಂಗಾಭದ್ರಾ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಗಂಗಾಮಾತೆ ಪೂಜೆ ಸಲ್ಲಿಸುವ ಮೂಲಕ ದೇವಿಯನ್ನು ಆರಾಧಿಸಿ, ಉತ್ತಮ ಮಳೆ ಬಿದ್ದು, ಬೆಳೆ ಚನ್ನಾಗಿ ಬಂದು ರೈತಾಪಿ ವರ್ಗವನ್ನು ಕಾಪಾಡುವಂತೆ ದೇವಿಯಲ್ಲಿ ರಾಮನಗರ ದೈವಸ್ಥರು ಪ್ರಾರ್ಥಿಸಿದರು.
ಪಡಿತರ ವಿತರಕರ ಸಂಘಕ್ಕೆ ಆಯ್ಕೆ
ಬಳ್ಳಾರಿ: ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಬಳ್ಳಾರಿ ನಗರದ ಪಡಿತರ ವಿತರಕರ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಅವರ ಅನುಮೋದನೆ ಮೇರೆಗೆ ನಗರ ಘಟಕಕ್ಕೆ ಆಯ್ಕೆ ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಎ. ಮುಂಡ್ರಿಗಿ ಬಸಪ್ಪ, ಅಧ್ಯಕ್ಷರಾಗಿ ಜಿ. ಪಾಲಾಕ್ಷಿ ರೆಡ್ಡಿ, ಉಪಾಧ್ಯಕ್ಷರಾಗಿ ಎಂ. ನಾಗರಾಜ ರಾವ್, ಕಾಕರ್ಲತೋಟ ವೆಂಕಟೇಶ್, ಕಾರ್ಯಾಧ್ಯಕ್ಷರಾಗಿ ಬಿ. ರಾಘವೇಂದ್ರರಾವ್, ಪ್ರಧಾನ ಕಾರ್ಯದರ್ಶಿಯಾಗಿ ಪಿ. ಪೆಂಚಲಯ್ಯ, ಕಾರ್ಯದರ್ಶಿಗಳಾಗಿ ಹುಂಡೇಕರ್ ಪ್ರಕಾಶ್, ಮುಜಾಹಿದ್, ಖಜಾಂಚಿಗಳಾಗಿ ಮೋಹನ್, ಮಾರುತಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸದಾಶಿವ, ಕೆ. ಮೋಹನ್, ಹಾಲದಹಳ್ಳಿ ಭೀಮನಗೌಡ, ಬುಜ್ಜಿ (ಸಂಜೀವ ಕುಮಾರ್), ಕೆ. ಸುಮಂಗಳಮ್ಮ, ಡಿ. ತುಕಾರಾಂ, ಎಸ್. ಉದಯಕುಮಾರ್, ಚಾಂದ್ಬಾಷಾ, ಶಿವಮ್ಮ, ಎಂ. ವೆಂಕಮ್ಮ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.