ಸೋಮ ರೆಡ್ಡಿ ನಿರಾಸಕ್ತಿ: ಉಳಿದ ಅನುದಾನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 29
ಬಳ್ಳಾರಿ ನಗರವನ್ನು ಸಿಂಗಾಪುರ ಸಿಟಿಯನ್ನಾಗಿ ಮಾಡುವ ಕನಸು ಹೊತ್ತು ಮಹಾನಗರ ಪಾಲಿಕೆಯಿಂದ ವಿಧಾನಸಭೆಗೆ ಎಂಟ್ರಿಯಾದ ರೆಡ್ಡಿ ಸಹೋದರರಲ್ಲಿ ಒಬ್ಬರಾದ ಹಾಲಿ ಕೆಎಂಎಫ್ ಅಧ್ಯಕ್ಷ ಹಾಗೂ ಬಳ್ಳಾರಿ ನಗರ ಕ್ಷೇತ್ರದ ನಿಕಟಪೂರ್ವ ಶಾಸಕ ಜಿ. ಸೋಮಶೇಖರ ರೆಡ್ಡಿ ಕೂಡ ಶಾಸಕರ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದಾರೆ.
ಅವರು 2012-13ನೇ ಸಾಲಿನಲ್ಲಿ ಬಂದ ಲಕ್ಷಾಂತರ ರು.ಗಳ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನು ಬಳಕೆ ಮಾಡಿಕೊಂಡಿಲ್ಲ. ಐದು ವರ್ಷಗಳಲ್ಲಿ ಬಂದ ರು. 475 ಲಕ್ಷ ಅನುದಾನದಲ್ಲಿ, ಕೇವಲ ರು. 247.56 ಲಕ್ಷ ಬಳಕೆ ಮಾಡಿಕೊಂಡಿದ್ದು, ರು. 227.44 ಲಕ್ಷ ಅನುದಾನ ಹಾಗೆಯೇ ಉಳಿದಿದೆ.
ರಸ್ತೆಗೆ ಮೀಸಲು: ಜಿಲ್ಲೆಯ ಪ್ರತಿ ಕ್ಷೇತ್ರದ ಶಾಸಕರಲ್ಲಿ ಹೆಚ್ಚಾಗಿ ಅನುದಾನ ಬಳಕೆಯಲ್ಲಿ ನಿರಾಸಕ್ತಿ ತೋರಿದ್ದಾರೆ. ಬಹುತೇಕ ಶಾಸಕರು ತಮ್ಮ ಐದು ವರ್ಷಗಳಲ್ಲಿ ಏನಿಲ್ಲವೆಂದರೂ ರು. 1ರಿಂದ 2 ಕೋಟಿ ಅನುದಾನ ಬಳಕೆಯನ್ನೇ ಮಾಡಿಕೊಂಡಿಲ್ಲ. ಇಂತಹ ಸಾಲಿನಲ್ಲಿ ಬಳ್ಳಾರಿ ನಗರದ ಹಿಂದಿನ ಶಾಸಕ ಜಿ. ಸೋಮಶೇಖರ ರೆಡ್ಡಿ ಸೇರುತ್ತಾರೆ. ಅವರು ತಮ್ಮ ಅನುದಾನದ ಬಹುತೇಕ ಭಾಗವನ್ನು ರಸ್ತೆಗಳ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. ಬಳ್ಳಾರಿ ಮಹಾನಗರದಲ್ಲಿ ಬಹುತೇಕ ರಸ್ತೆಗಳು ಬರುವುದರಿಂದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದಂತಿದೆ. ಅವರು ತಮ್ಮ ಅವಧಿಯಲ್ಲಿ ಅನುದಾನ ಬಳಕೆಗೆ ಹೆಚ್ಚಿನ ಕಾಳಜಿ ತೋರಿದಂತೆ ಕಾಣುತ್ತಿಲ್ಲ. ಅನುದಾನದ ಬಳಕೆ, ಬಂದ ಹಣದ ಅಂಕಿ ಅಂಶಗಳೇ ಅದನ್ನು ತಿಳಿಸುತ್ತವೆ.
ಬಳಕೆಯಲ್ಲಿ ಹಿಂದೆ: ಬಳ್ಳಾರಿ ನಗರ ಕ್ಷೇತ್ರದ ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ ಅವರಿಗೆ ಐದು ವರ್ಷಗಳಲ್ಲಿ ರು. 475 ಲಕ್ಷ ಬಿಡುಗಡೆಯಾಗಿದ್ದರೆ, ಅದರಲ್ಲಿ ಕೇವಲ ರು. 247.56 ಲಕ್ಷ ಮಾತ್ರ ಬಳಕೆ ಮಾಡಿದ್ದಾರೆ. ಇನ್ನುಳಿದಂತೆ ರು. 227.44 ಲಕ್ಷಗಳನ್ನು ಬಳಕೆ ಮಾಡಬೇಕಾಗಿದೆ.
2008-09ರಲ್ಲಿ ರು. 150 ಲಕ್ಷಗಳಲ್ಲಿ ರು. 127.50 ಲಕ್ಷ ಬಳಕೆ ಮಾಡಿದ್ದರೆ, 2009-10ರಲ್ಲಿ ರು. 50 ಲಕ್ಷಗಳಲ್ಲಿ ರು. 36.38 ಲಕ್ಷ ಬಳಕೆ ಮಾಡಿದ್ದಾರೆ. 2010-11ರಲ್ಲಿ ರು. 100 ಲಕ್ಷದಲ್ಲಿ ರು. 61.24 ಲಕ್ಷ ಬಳಸಿದ್ದು, ಇನ್ನು ರು. 38.76 ಲಕ್ಷ ಬಳಕೆ ಮಾಡಬೇಕಾಗಿದೆ. 2011-12ರಲ್ಲಿ ರು. 100 ಲಕ್ಷ ಅನುದಾನದಲ್ಲಿ ರು. 22.44 ಲಕ್ಷ ಬಳಕೆ ಮಾಡಿದ್ದು, ರು. 77.56 ಲಕ್ಷ ಬಳಸಬೇಕಿದೆ. 2012-13ರಲ್ಲಿ ರು. 75 ಲಕ್ಷ ಮಂಜೂರಾಗಿದ್ದು, ಅದರಲ್ಲಿ ಒಂದು ಪೈಸೆಯನ್ನು ಬಳಸದೇ ಇರುವುದು ನಿಜಕ್ಕೂ ಆಶ್ಚರ್ಯ ಮೂಡಿಸಿದೆ.
ರಸ್ತೆ ಅಭಿವೃದ್ಧಿಗೆ ರು. 324.24 ಲಕ್ಷ: ಸೋಮಶೇಖರ ರೆಡ್ಡಿ ಅವರು ತಮ್ಮ ಐದು ವರ್ಷಗಳ ಒಟ್ಟು ರು. 475 ಲಕ್ಷ ಅನುದಾನದಲ್ಲಿ ಬರೋಬ್ಬರಿ ರು. 324.24 ಲಕ್ಷ ಹಣವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿದ್ದಾರೆ. 2008-09ನೇ ಸಾಲಿನಲ್ಲಿ ರು. 102.90 ಲಕ್ಷ ರಸ್ತೆ ಅಭಿವೃದ್ಧಿಗೆ ನೀಡಲಾಗಿದೆ. 2009-10ನೇ ಸಾಲಿನಲ್ಲಿ ರು. 35 ಲಕ್ಷ, 2010-11ರಲ್ಲಿ ರು. 83.42 ಲಕ್ಷ, 2011-12ರಲ್ಲಿ ರು. 85.98 ಲಕ್ಷ, 2012-13ರಲ್ಲಿ ರು. 16.94 ಲಕ್ಷ ರಸ್ತೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಇವರ ಅವಧಿಯಲ್ಲಿ ಹಾಗೂ ಮಹಾನಗರ ಪಾಲಿಕೆಯಿಂದ ಬಳ್ಳಾರಿ ನಗರದಲ್ಲಿ ಕೆಲ ರಸ್ತೆಗಳ ಅಭಿವೃದ್ಧಿಯಾಗಿವೆ ಎನ್ನಬಹುದು.
ಅನುದಾನ ಹಂಚಿಕೆ: ಸೋಮಶೇಖರ ರೆಡ್ಡಿ ತಮ್ಮ ಕ್ಷೇತ್ರಕ್ಕೆ ಬಂದ ಅನುದಾನವನ್ನು ಕೇವಲ ಆರು ಕಾಮಗಾರಿಗಳಿಗೆ ಮಾತ್ರ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಸಮುದಾಯ ಭವನಕ್ಕೆ ರು. 62.35 ಲಕ್ಷ ನೀಡಿದ್ದಾರೆ. ಚರಂಡಿ ನಿರ್ಮಾಣಕ್ಕೆ 2 ಲಕ್ಷ, ಬೀದಿ ದೀಪ ಅಳವಡಿಸಲು ರು. 15 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 10 ಲಕ್ಷ, ಶಾಲೆಗಳ ಕೊಠಡಿ ನಿರ್ಮಾಣ, ಕಾಂಪೌಂಡ್ ಮತ್ತು ಮೈದಾನದ ಅಭಿವೃದ್ಧಿಗೆ ರು. 5 ಲಕ್ಷ ಮೀಸಲಿಟ್ಟಿದ್ದಾರೆ. ಅನುದಾನದ ಬಹುತೇಕ ಭಾಗವನ್ನು ರಸ್ತೆ ಅಭಿವೃದ್ಧಿಗೆ ಮೀಸಲಿಟ್ಟಿರುವ ಶಾಸಕ ಎಂಬ ಹೆಗ್ಗಳಿಕೆಗೆ ಸೋಮಶೇಖರ ರೆಡ್ಡಿ ಪಾತ್ರರಾಗಿದ್ದಾರೆ.
ಜಿ. ಸೋಮಶೇಖರ ರೆಡ್ಡಿ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಈ ಬಾರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅನಿಲ್ ಲಾಡ್ ಆಯ್ಕೆಯಾಗಿದ್ದಾರೆ. ಈ ಶಾಸಕರಾದರೂ ಅದುವರೆಗೆ ಉಳಿದ ಅನುದಾನ ಹಾಗೂ ಈಗ ಅವರಿಗೆ ಬರಲಿರುವ ಅನುದಾನವನ್ನು ಸಮರ್ಪಕವಾಗಿ ಹಂಚಿಕೆ ಮಾಡುವಲ್ಲಿ ಹೆಚ್ಚಿನ ಕಾಳಜಿವಹಿಸುವುದು ಅಗತ್ಯ ಅಲ್ಲವೇ?
ಶಶಿಧರ ಮೇಟಿ