ಅನುದಾನ ಬಳಕೆ: ಕೈ ಕೊಟ್ಟ ತುಕಾರಾಂ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 30
ಜಿಲ್ಲೆಯಲ್ಲಿ 9 ಶಾಸಕರ ಪೈಕಿ ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕ ಈ. ತುಕಾರಾಂ ಮಾತ್ರ ಕಾಂಗ್ರೆಸ್ ಶಾಸಕರು. ಆದರೆ ಇವರು ಉಳಿದ ಶಾಸಕರಂತೆ ಬೇರೆಯಲ್ಲ ಎಂಬುದನ್ನು ಅನುದಾನ ಬಳಕೆಯಲ್ಲಿ ಹಿಂದೆ ಬೀಳುವ ಮೂಲಕ ತೋರಿಸಿಕೊಟ್ಟಿದ್ದಾರೆ.
ಅನುದಾನ ಬಳಕೆಯಲ್ಲಿ ಅವರ ಸಾಧನೆ ಅಷ್ಟು ತೃಪ್ತಿಕರವಾಗಿಲ್ಲ. ಐದು ವರ್ಷಗಳಲ್ಲಿ ರು. 4.75 ಕೋಟಿ ಮಂಜೂರಾಗಿದ್ದು, ಅದರಲ್ಲಿ ಕೇವಲ ರು. 2.68 ಕೋಟಿ ಬಳಕೆ ಮಾಡಿದ್ದಾರೆ. ರು. 2.06 ಇನ್ನು ಬಳಕೆ ಮಾಡಬೇಕಾಗಿದೆ. ಅವರು ಕೂಡ ತಮ್ಮ ಅನುದಾನದ ಸಿಂಹಪಾಲನ್ನು ಸಮುದಾಯ ಭವನಕ್ಕೇ ಮೀಸಲಿಟ್ಟಿದ್ದಾರೆ.
ಜಿಲ್ಲೆಯ ಈ ಹಿಂದಿನ ಬಿಜೆಪಿಯ ಶಾಸಕರು ಮಾತ್ರ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು, ಶಾಸಕರು ಬೀಗುವಂತಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಸಂಡೂರಿನಲ್ಲಿ ಮಾತ್ರ ಕಾಂಗ್ರೆಸ್ ಶಾಸಕ ಈ. ತುಕಾರಾಂ ಜಯಗಳಿಸಿದ್ದು, ಅವರು ಕೂಡ ಅನುದಾನ ಬಳಕೆಯಲ್ಲಿ ಹಿಂದೆ ಬಿದ್ದಿದ್ದಾರೆ. 2011-12ನೇ ಸಾಲಿನ ಇನ್ನೂ ಸಾಕಷ್ಟು ಅನುದಾನವನ್ನು ಬಳಕೆ ಮಾಡಬೇಕಾಗಿದೆ. ಕಾಂಗ್ರೆಸ್ ಶಾಸಕರಿಗೂ ಅನುದಾನ ಬಳಕೆಯ ಬಗ್ಗೆ ಅಸಡ್ಡೆ ಇದ್ದೇ ಇದೆ ಎಂಬುದನ್ನು ತುಕಾರಾಂ ಬಳಸಿರುವ ಅನುದಾನದ ಪ್ರಮಾಣ ಹೇಳುತ್ತದೆ. ಇದೀಗ ಸಂಡೂರು ಕ್ಷೇತ್ರದ ಜನರು ಈ. ತುಕಾರಾಂ ಅವರನ್ನು ಪುನರಾಯ್ಕೆ ಮಾಡಿದ್ದು, ಈ ಬಾರಿಯಾದರೂ ಅನುದಾನ ಬಳಕೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ.
ಸಮುದಾಯ ಭವನ, ರಸ್ತೆಗೆ ಆದ್ಯತೆ: ಜಿಲ್ಲೆಯ ಬಹುತೇಕ ಶಾಸಕರಂತೆ ಈ. ತುಕಾರಾಂ ಅವರು ತಮ್ಮ ಅನುದಾನದಲ್ಲಿ ಪ್ರಥಮ ಆದ್ಯತೆಯಾಗಿ ಸಮುದಾಯ ಭವನಕ್ಕೆ ನೀಡಿದ್ದಾರೆ. ಎರಡನೇ ಆದ್ಯತೆಯನ್ನು ರಸ್ತೆಗಳಿಗೆ ನೀಡಿದ್ದಾರೆ. ತಮ್ಮ ಐದು ವರ್ಷಗಳ ರು. 475 ಲಕ್ಷಗಳ ಅನುದಾನದಲ್ಲಿ ರು. 176.45 ಲಕ್ಷಗಳನ್ನು ಸಮುದಾಯ ಭವನಕ್ಕೆ ನೀಡಿದ್ದಾರೆ. 2008-09ರಲ್ಲಿ ರು. 47.50 ಲಕ್ಷಗಳನ್ನು ಸಮುದಾಯ ಭವನಕ್ಕೆ ನೀಡಿದ್ದಾರೆ. 2009-10ರಲ್ಲಿ ರು. 28.38 ಲಕ್ಷ, 2010-11ರಲ್ಲಿ ರು. 46.24 ಲಕ್ಷ, 2011-12ರಲ್ಲಿ ರು. 33.38 ಲಕ್ಷ ಹಾಗೂ 2012-13ರಲ್ಲಿ ರು. 20.95 ಲಕ್ಷ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕಾಗಿಯೇ ನೀಡಿದ್ದಾರೆ. ಇನ್ನು ಕ್ಷೇತ್ರಗಳ ರಸ್ತೆಗಳ ಅಭಿವೃದ್ಧಿಗೆ ರು. 149.84 ಲಕ್ಷ ಅನುದಾನ ನೀಡಿದ್ದಾರೆ. 2008-09ರಲ್ಲಿ ರು. 80 ಲಕ್ಷ, 2009-10ರಲ್ಲಿ ರು. 13 ಲಕ್ಷ, 2010-11ರಲ್ಲಿ ರು. 41.54 ಲಕ್ಷ, 2011-12ರಲ್ಲಿ ರು. 13.89 ಲಕ್ಷ, 2012-13ರಲ್ಲಿ ರು. 1.41 ಲಕ್ಷ ರಸ್ತೆಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆ.
ಅನುದಾನ ಬಳಕೆಯಲ್ಲಿ ಹಿಂದೆ: ಅನುದಾನ ಬಳಕೆಯಲ್ಲಿ ಕೇವಲ ಬಿಜೆಪಿ ಶಾಸಕರು ಮಾತ್ರವಲ್ಲ ಕಾಂಗ್ರೆಸ್ ಶಾಸಕರು ಹಿಂದೆ ಬಿದ್ದಿದ್ದಾರೆ. ಐದು ವರ್ಷಗಳಲ್ಲಿ ರು. 475 ಲಕ್ಷ ಅನುದಾನ ಮಂಜೂರಾಗಿದ್ದು, ಅದರಲ್ಲಿ ರು. 268.18 ಲಕ್ಷ ಮಾತ್ರ ಬಳಕೆ ಮಾಡಿದ್ದು, ಇನ್ನು ರು. 206.82 ಲಕ್ಷ ಬಳಕೆ ಮಾಡಬೇಕಾಗಿದೆ. 2008-09ರಲ್ಲಿ ರು. 150 ಲಕ್ಷ, 2009-10ರಲ್ಲಿ ರು. 50 ಲಕ್ಷ ಬಳಕೆ ಮಾಡಿಕೊಂಡಿದ್ದಾರೆ. 2010-11ರಲ್ಲಿ ರು. 100 ಲಕ್ಷಗಳಲ್ಲಿ ರು. 51.58 ಲಕ್ಷ ಬಳಕೆ ಮಾಡಿದ್ದು, ರು. 48.42 ಲಕ್ಷ ಹಾಗೆಯೇ ಉಳಿದಿದೆ. 2011-12ರಲ್ಲಿ ರು. 100 ಲಕ್ಷಗಳಲ್ಲಿ ಕೇವಲ ರು. 8.30 ಲಕ್ಷ ಬಳಕೆ ಮಾಡಿದ್ದು, ಇನ್ನು ರು. 91.7 ಲಕ್ಷ ಬಳಕೆಯಾಗಿಲ್ಲ. ಇನ್ನು ಚುನಾವಣೆ ವರ್ಷ ಎಂದೇ ಕರೆಯಲಾದ 2012-13ನೇ ಸಾಲಿನ ರು. 75 ಲಕ್ಷ ಅನುದಾನದಲ್ಲಿ ಕೇವಲ ರು. 8.30 ಲಕ್ಷ ಬಳಕೆ ಮಾಡಿ, ರು. 66.7 ಲಕ್ಷ ಬಳಸದೇ ಹಾಗೆ ಬಿಟ್ಟಿದ್ದಾರೆ ಶಾಸಕ ತುಕಾರಾಂ.
ಅನುದಾನ ಹಂಚಿಕೆ: ಶಾಸಕ ಈ. ತುಕಾರಾಂ ಅವರು ತಮ್ಮ ಐದು ವರ್ಷಗಳ ಅನುದಾನವನ್ನು 11 ಕಾಮಗಾರಿಗಳಿಗೆ ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಸಮುದಾಯ ಭವನ ನಿರ್ಮಾಣ ಮತ್ತು ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಚರಂಡಿ ನಿರ್ಮಾಣಕ್ಕೆ ರು. 8.50 ಲಕ್ಷ, ಚೆಕ್ಡ್ಯಾಂ ನಿರ್ಮಾಣಕ್ಕೆ ರು. 9.62 ಲಕ್ಷ, ಕುಡಿಯುವ ನೀರಿನ ಕಾಮಗಾರಿಗೆ ರು. 3 ಲಕ್ಷ, ದೀಪ ಅಳವಡಿಸಲು ರು. 2.36 ಲಕ್ಷ, ಶೌಚಾಲಯ ನಿರ್ಮಾಣಕ್ಕೆ ರು. 13.10 ಲಕ್ಷ, ಶಾಲೆಗಳ ಕೊಠಡಿ ನಿರ್ಮಾಣ, ಕಾಂಪೌಂಡ್ ಮತ್ತು ಮೈದಾನದ ಅಭಿವೃದ್ಧಿಗೆ ರು. 10.50 ಲಕ್ಷ, ಗ್ರಂಥಾಲಯಗಳಿಗೆ ರು. 2.14 ಲಕ್ಷ, ಕ್ರೀಡಾಂಗಣಕ್ಕೆ ರು. 2.06 ಲಕ್ಷ ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳಿಗಾಗಿ ರು. 2.90 ಲಕ್ಷ ಬಳಕೆ ಮಾಡಿದ್ದಾರೆ. ತಮ್ಮ ಅನುದಾನವನ್ನು ವಿವಿಧ ಕಾಮಗಾರಿಗೆ ಹಂಚಿಕೆ ಮಾಡಿದ್ದಾರೆ. ಆದರೆ ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಕೆ ಮಾಡಿಲ್ಲ ಎಂಬುದು ಅಸಮಾಧಾನದ ಸಂಗತಿ.
ಜಿಲ್ಲೆಯ ಅಂದಿನ ಕಾಂಗ್ರೆಸ್ ಪಕ್ಷದ ಏಕೈಕ ಶಾಸಕ ಈ. ತುಕಾರಾಂ ಅವರನ್ನು ಸಂಡೂರು ವಿಧಾನಸಭಾ ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆ ಮಾಡಿದ್ದು, ಹಿಂದಿನ ಅವಧಿಯ ಅನುದಾನದ ಬಳಕೆಯ ಜತೆಗೆ, ಈ ಅವಧಿಯಲ್ಲಿ ಅನುದಾನವನ್ನು ನಿಗದಿತ ಅವಧಿಯಲ್ಲಿ, ವಿಶೇಷವಾದ ರೀತಿಯಲ್ಲಿ ಬಳಕೆಗೆ ಅವಕಾಶವಿದ್ದು, ಈ ಬಾರಿಯಾದರೂ ಅನುದಾನ ಬಳಕೆಗೆ ಕಾಳಜಿವಹಿಸುವರೇ ಎಂಬುದನ್ನು ನೋಡಬೇಕು.
ಶಶಿಧರ ಮೇಟಿ