ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ಅಗತ್ಯ: ಪ್ರಮೋದ್

Mainashree
Updated On : 31 Aug 2013, 10:30 am

ಕೂಡ್ಲಿಗಿ: ತಾಂತ್ರಿಕ ಶಿಕ್ಷಣ ಇಂದು ಎಲ್ಲಾ ರಂಗಗಳಿಗೂ ವ್ಯಾಪಿಸಿದ್ದು, ದೇಶದ ಅಭಿವೃದ್ಧಿಯಲ್ಲಿ ತನ್ನದೇ ಆದ ಪಾತ್ರ ವಹಿಸಿದೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಳ್ಳಲು ತಾಂತ್ರಿಕ ಶಿಕ್ಷಣ ಅಗತ್ಯ ಎಂದು ಕೂಡ್ಲಿಗಿ ಗ್ರೇಡ್- 2 ತಹಸೀಲ್ದಾರ್ ಪಿ. ಪ್ರಮೋದ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಗುರುವಾರ ಪಟ್ಟಣ ಹಿರೇಮಠ ಕಲ್ಯಾಣ ಮಂಟಪ ಆವರಣದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಕೂಡ್ಲಿಗಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಪ್ರತಿಭಾನ್ವಿತರಿದ್ದು, ಈ ಬಾರಿ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಸ್ಟಿಂಗ್‌ನ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮೂಲ ಸೌಕರ್ಯಗಳ ಕೊರತೆಯಲ್ಲಿಯೂ ಹೆಚ್ಚು ಅಂಕ ಗಳಿಸಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯೆ ಟಿ. ಕೊತ್ಲಮ್ಮ ಮಾತನಾಡಿ, ವಿದ್ಯಾರ್ಥಿಗಳು ಬರೀ ವಿದ್ಯಾವಂತರಾದರೆ ಸಾಲದು. ಸಮಾಜಮುಖಿಯಾಗಿ ಜೀವನ ನಡೆಸುವ ಪಾಠ ಕಲಿಯಬೇಕಿದೆ. ಇಂದಿನ ತಾಂತ್ರಿಕ ಯುಗದಲ್ಲಿ ದಾರಿ ತಪ್ಪಲು ಸಾಕಷ್ಟು ಅವಕಾಶಗಳಿವೆ. ಸನ್ಮಾರ್ಗದಲ್ಲಿ ಸಾಗಲೂ ಅವಕಾಶಗಳಿವೆ. ಆದರೆ ವಿದ್ಯಾರ್ಥಿಗಳು ಉತ್ತಮವಾದುದನ್ನು ಆಯ್ಕೆ ಮಾಡಿಕೊಂಡು ಶಿಸ್ತು, ಸಂಯಮ, ಶ್ರದ್ಧೆಯಿಂದ ಕಾರ್ಯನಿರ್ವಹಿಸಿದಲ್ಲಿ ಯಶಸ್ಸು ಸಾಧ್ಯ ಎಂದರು.
ಹಿರೇಮಠದ ಶ್ರೀ ಪ್ರಶಾಂತ ಸಾಗರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಪ್ರಾಚಾರ್ಯ  ಅಕ್ಕಸಾಲಿ ನೀಲಕಂಠಚಾರಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ಜಿ. ಶ್ರೀಧರ್, ನಿವೃತ್ತ ಪ್ರಾಚಾರ್ಯ ಶೇಷಗಿರಿರಾವ್, ವಿಷಯ ಮೇಲ್ವಿಚಾರಕ ಎಚ್. ಹರ್ಷ, ಶರ್ಮಾಸ್ ವಲಿ, ಹಳ್ಳೇರ್ ಮಂಜು, ಸಿ.ಎಂ. ರೂಪಾ, ಎಸ್.ವಿ. ಶೀಲಾ ಉಪಸ್ಥಿತರಿದ್ದರು. ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement