ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ
ಹೂವಿನಹಡಗಲಿ: ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ತಾಪಂ ಕಚೇರಿ ಮುಂದೆ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಚಾಲಕ ರಂಗಪ್ಪ ದಾಸರ ಹಾಗೂ ಜಿಲ್ಲಾ ಸಂಚಾಲಕ ಅಸ್ಮಾನ್ ಬಾಷಾ ಮಾತನಾಡಿ, ಕಳೆದೊಂದು ದಶಕದಿಂದಲೂ ಜಾಗತೀಕರಣದ ಪ್ರಭಾವದಿಂದ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯರ ಬದುಕು ಬೀದಿ ಪಾಲಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅಂಗವಿಕಲರ ಕುಟುಂಬಗಳ ಆದಾಯ ಮಾತ್ರ ಹೆಚ್ಚಳವಾಗಿಲ್ಲ. ಕುಟುಂಬದ ಸದಸ್ಯರ ಮೇಲೆ ಅವಲಂಬಿತರಾಗಿದ್ದು, ಸರ್ಕಾರ ನೀಡುತ್ತಿರುವ ರು. 400-1000 ಸಹಾಯಧನ ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದರು.
ಈ ಕುರಿತು ಅನೇಕ ಬಾರಿ ಕಚೇರಿಗಳಿಗೆ ಅಲೆದಾಡಿದ್ದರೂ ಸರ್ಕಾರಿ ಸೌಲಭ್ಯಗಳು ಸಮರ್ಪಕವಾಗಿ ಸಿಗದೇ, ನಿರುದ್ಯೋಗಿ ಅಂಗವಿಕಲರಿಗೆ ಸರ್ಕಾರಿ ಉದ್ಯೋಗದ ಭ್ರಮೆಯಲ್ಲಿ ಉಳಿಯುವಂತಾಗಿದೆ. ಸ್ವ ಉದ್ಯೋಗಕ್ಕೆ ಸಾಲ ಸೌಲಭ್ಯ ಸಿಗದೇ ನಿತ್ಯ ಪರದಾಡಬೇಕಿದೆ ಎಂದು ಅಂಗವಿಕಲರ ಕಷ್ಟಗಳನ್ನು ಹೇಳಿಕೊಂಡರು.
ಬೇಡಿಕೆಗಳು: ಅಂಗವಿಕಲರ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ತಪಾಸಣೆ ಶಿಬಿರ ನಡೆಸಿ ಅರ್ಹರಿಗೆ ನಿವೇಶನ, ವಸತಿ, ವಿಶೇಷ ಶೌಚ ಸೇರಿದಂತೆ ಇಲಾಖೆಗಳ ಶೇ. 3ರಷ್ಟು ಅನುದಾನ ನೀಡಬೇಕು. ಆಧಾರ್ ಕಾರ್ಡ್ ಇತರೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಅಂಗವಿಕಲರಿಗೆ ಪ್ರತ್ಯೇಕ ಕೌಂಟರ್ ತೆರೆಯಬೇಕು. ಪ್ರತಿ ತಿಂಗಳು ಅಂಗವಿಕಲರ ಕುಂದು ಕೊರತೆ ಸಭೆ ನಡೆಸಬೇಕು. ಬಸ್‌ಪಾಸ್ ದರ ಏರಿಕೆ ಹೆಚ್ಚಳ ವಾಪಾಸ್ ಪಡೆಯಬೇಕು. ಎಲ್ಲ ಅಂಗವಿಕಲರಿಗೂ ರು. 2 ಸಾವಿರ ಮಾಸಾಶನ ನಿಗದಿ ಮಾಡಬೇಕು. ಗ್ರಾಪಂ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗವಿಕಲರನ್ನು ಕಾಯಂ ಮಾಡಿ ವೇತನ ನಿಗಧಿ ಮಾಡಬೇಕೆಂದು ಒತ್ತಾಯಿಸಿ ತಾಪಂ ಇಒ ಸಿದ್ದೇಶ್ವರಗೆ ಮನವಿಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಇಟ್ಟಿಗಿ ಚಂದ್ರಶೇಖರಯ್ಯ, ಎಚ್. ಶಿವರಾಜ್, ಎಂ. ಕೋಟೆಪ್ಪ, ಪಿ. ಹೂನ್ನೂರಸಾಬ್, ಡಿ. ನಾಗರಾಜ, ಮಂಜುನಾಥ ನಾಯ್ಕ ಇದ್ದರು.