ಉತ್ತಮ ಆರೋಗ್ಯಕ್ಕೆ ಯೋಗ ಔಷಧಿ: ಕೊಟ್ರಪ್ಪ
ಹಗರಿಬೊಮ್ಮನಹಳ್ಳಿ: ಮನುಷ್ಯ ತನ್ನ ಜೀವಿತಾವಧಿಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತನಾಗಿರಲು ಯೋಗ ಸಹಕಾರಿಯಾಗುತ್ತದೆ ಎಂದು ಅಕ್ಕಿ ಕೊಟ್ರಪ್ಪ ಅಭಿಪ್ರಾಯಿಸಿದ್ದಾರೆ.
ತಾಲೂಕಿನ ತಂಬ್ರಹಳ್ಳಿ ಗ್ರಾಮದಲ್ಲಿ ಅಕ್ಕಿ ಬಸಮ್ಮ ತೋಟಪ್ಪ ಸಾರ್ವಜನಿಕ ದತ್ತಿನಿಧಿ ಹಾಗೂ ಬಸವ ಯೋಗ ಕೇಂದ್ರದ ವತಿಯಿಂದ 21 ದಿನಗಳ ಕಾಲ ನಡೆದ ಯೋಗ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಿನಂಪ್ರತಿ ಯೋಗ ಮಾಡುವುದರಿಂದ ದೇಹ ದಣಿದು ದೈಹಿಕ ಸಾಮರ್ಥ್ಯ ಹೆಚ್ಚುತ್ತದೆ ಹಾಗೂ ಮಾನಸಿಕವಾಗಿ ಏಕಾಗ್ರತೆ ಕಂಡುಕೊಳ್ಳಬಹುದು ಎಂದರು.
ಕೊಪ್ಪಳದ ಶಿವಯ್ಯ ಶಶಿಮಠ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಅತ್ಯಮೂಲ್ಯ ಜೀವನವನ್ನು ಕೆಲ ದುಶ್ಚಟಗಳಿಂದ ಹಾಳು ಮಾಡಿಕೊಳ್ಳದೆ ಸದ್ಬುದ್ಧಿಯುಳ್ಳವರಾಗಿ ನಡೆಯಬೇಕಾಗುತ್ತದೆ ಹಾಗೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಸಿದರು.
ಮೈಸೂರಿನ ಬಸವಾಶ್ರಮದ ಮಾತಾ ಬಸವಾಂಜಲಿ ಅಮ್ಮನವರು ಮಾತನಾಡಿ, ಬಸವಣ್ಣನವರು ಅಂದಿನ ಕಾಲದಲ್ಲಿ ಯೋಗವನ್ನು ಕಲಿತಿದ್ದರು. ಯೋಗ ತಲತಲಾಂತರದಿಂದ ಬಂದಿದೆ. ಯೋಗ ಶಿಬಿರ ಏರ್ಪಡಿಸಿ ಜನರ ಕಾಳಜಿ ವಹಿಸುವುದು ಉತ್ತಮ ಬೆಳವಣಿಗೆ ಎಂದರು. ದತ್ತಿ ನಿಧಿಯ ಕಾರ್ಯದರ್ಶಿ ಅಕ್ಕಿ ಬಸವರಾಜ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಗ್ರಾಪಂ ಸದಸ್ಯ ಖಾದರ್ ಸಾಬ್, ಎಂ. ಬಸವರಾಜಪ್ಪ, ಎಚ್.ಎಂ. ಪ್ರಕಾಶ್, ಟಿ.ಜಿ. ದೊಡ್ಡಬಸಪ್ಪ, ಬಿ. ಬಸವರಾಜ ಇದ್ದರು. ಎಂ.ಎಸ್. ಕಲ್ಗುಡಿ ನಿರೂಪಿಸಿದರು. ಎಚ್.ಬಿ. ಗಂಗಾಧರಗೌಡ ವಂದಿಸಿದರು.