ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ರಾಮಣ್ಣ ಗೆದ್ರೂ ಲೀಡ್ರು, ಸೋತ್ರೂ ಲೀಡ್ರು: ಸಿದ್ದೇಶ್ವರ

Mainashree
Updated On : 1 Sept 2013, 11:16 am

ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಆ. 31
ಜಗಳೂರಿನ ರಾಮಣ್ಣ ಗೆದ್ದರೂ ಲೀಡರ್... ಸೋತರೂ ಲೀಡರ್ ಎನ್ನುವುದಕ್ಕೆ ಅವರು ಕಳೆದ ಚುನಾವಣೆಯಲ್ಲಿ ಸೋತರೂ ಅವರ ಹಿಂದೆ ಈಗಲೂ ಲಕ್ಷಗಟ್ಟಲೆ ಅಭಿಮಾನಿಗಳು ಇರುವುದೇ ಸಾಕ್ಷಿ ಎಂದು ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಎಸ್.ವಿ. ರಾಮಚಂದ್ರ ಅವರನ್ನು ಬಣ್ಣಿಸಿದರು.
ಅವರು ತಾಲೂಕಿನ ಸುಕ್ಷೇತ್ರ ಗಾಣಗಟ್ಟೆ ಶ್ರೀ ಮಾಯಮ್ಮ ದೇವಸ್ಥಾನದ ಬಳಿ ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ತಮ್ಮ ತಾಯಿ ಕೆಂಚಮ್ಮ ವೀರಪ್ಪ ಜ್ಞಾಪಕಾರ್ಥ ನಿರ್ಮಿಸಿದ ವಸತಿ ಸೌಧ ಉದ್ಘಾಟಿಸಿ ಮಾತನಾಡಿದರು.
ರಾಮಚಂದ್ರ ಸೋತರೂ ಈಗಲೂ ಜನಸೇವೆ ಮಾಡುತ್ತಿದ್ದಾರೆ, ಅದಕ್ಕೆ ಗಾಣಗಟ್ಟೆ ಮಾಯಮ್ಮ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ತಮ್ಮ ತಾಯಿ ಹೆಸರಿನಲ್ಲಿ ಕೋಟಿ ಸ್ವಂತ ಹಣದಿಂದ ವಸತಿ ಸೌಧ ನಿರ್ಮಿಸಿರುವುದೇ ಸಾಕ್ಷಿ. ನಮ್ಮ ರಾಮಣ್ಣ ಮಾಯಮ್ಮನ ಅಪ್ಪಟ ಭಕ್ತ, ಸೇವಕ ನನಗೆ ಮಾಯಮ್ಮನ ಶಕ್ತಿ ಬಗ್ಗೆ ಪದೇ ಪದೇ ಹೇಳುತ್ತಿದ್ದರು. ಅದಕ್ಕಾಗಿ ನಾನು ಸುಕ್ಷೇತ್ರಕ್ಕೆ ಬರಲು ಅವಕಾಶವಾಯಿತು ಎಂದು ಸಂಸದ ಸಿದ್ದೇಶ್ವರ ತಿಳಿಸಿದರು.
ತಪ್ಪು ಮಾಡಿದ್ದಕ್ಕೆ ಸೋತೆ: ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ, ನಾನು ಎಲ್ಲೋ ತಪ್ಪುಮಾಡಿದ್ದೇನೆ, ಅದಕ್ಕಾಗಿಯೇ ಕಳೆದ ಬಾರಿಯ ಚುನಾವಣೆಯಲ್ಲಿ ಸೋತಿದ್ದೇನೆ. ಹೀಗಾಗಿಯೇ ಗಾಣಗಟ್ಟೆ ಮಾಯಮ್ಮನಲ್ಲೂ ಕ್ಷಮೆ ಯಾಚಿಸಿದ್ದೇನೆ ಎಂದು ತಮ್ಮ ಸೋಲಿನ ಪರಾಮರ್ಶೆ ಮಾಡಿಕೊಂಡರು. ನಾನು ಯಾವುದೆ ವರ ಬೇಡಿದರೂ ಮಾಯಮ್ಮ ಕರುಣಿಸುತ್ತಾಳೆ, ಮೊದಲ ಬಾರಿಗೆ ಶಾಸಕನಾಗಿದ್ದು ಮಾಯಮ್ಮನ ಕೃಪೆಯಿಂದ. ಹೀಗಾಗಿ ಮಾಯಮ್ಮನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಈಗ ಸೋತಿದ್ದರೂ ನನಗೆ ಎಳ್ಳಷ್ಟೂ ಆತಂಕವಿಲ್ಲ. ಈಗಲೂ ನನಗೆ ಸೋಲು ಗೆಲವಾಗಿಯೇ ಕಾಣುತ್ತದೆ. ಕಾರಣ ನನಗೆ ಮಾಯಮ್ಮನ ಆಶೀರ್ವಾದ, ಜನತೆ ಅಭಿಮಾನ ಇದೆ ಎಂದರು.
ವಿಧಾನಪರಿಷತ್ ಸದಸ್ಯ ರಘು ಆಚಾರ್ಯ, ಗಾಯಿತ್ರಿ ಸಿದ್ದೇಶ್ವರ, ಇಂದಿರಾ ರಾಮಚಂದ್ರಪ್ಪ, ದಾವಣಗೆರೆ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ನಾಗರಾಜ, ಜಿಪಂ ಸದಸ್ಯೆ ಜಯಲಕ್ಷ್ಮೀ ಮಹೇಶ್, ಹರಪ್ಪನಹಳ್ಳಿ ಕೆಜೆಪಿ ಅಧ್ಯಕ್ಷ ಎನ್. ಕೊಟ್ರೇಶ್, ಉದ್ಯಮಿ ವೇದಮೂರ್ತಿ, ಕೊಟ್ಟೂರಿನ ಪಿ.ಎಚ್. ದೊಡ್ಡರಾಮಣ್ಣ, ನಿಂಬಳಗೆರೆ ಗ್ರಾಪಂ ಅಧ್ಯಕ್ಷೆ ಚಂದ್ರಮ್ಮ, ಪ್ರಧಾನ ಅರ್ಚಕ ನಾಗರಾಜ, ತಳವಾರ ಶರಣಪ್ಪ, ಗಾಣಗಟ್ಟೆ ಪಾಪಣ್ಣ, ಮಹಾಂತೇಶ್, ಜಗಳೂರು ತಾಪಂ ಸದಸ್ಯ ಶ್ರೀನಿವಾಸ, ಬೊಮ್ಮಣ್ಣ, ಸಿದ್ದಲಿಂಗಪ್ಪ, ರುದ್ರಮ್ಮ, ತಿಪ್ಪೇಸ್ವಾಮಿ ಸೇರಿ ಇತರರಿದ್ದರು.
ಹೆಲಿಕಾಪ್ಟರ್ ಮೂಲಕ ಸುಮಾರು 125 ಅಡಿ ಎತ್ತರದ ಗೋಪುರ ಮತ್ತು ವಸತಿ ಸೌಧಕ್ಕೆ ಪುಷ್ಪಾರ್ಚನೆ ಮಾಡಿದ್ದು ನೋಡುಗರ ಮನ ಸೆಳೆಯಿತು. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಹೋಮ, ಹವನಗಳು ನಡೆದವು. ಭದ್ರಾವತಿ ಬೀಟ್ಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement