ಅಂಗನವಾಡಿ ಕಾರ್ಯಕರ್ತೆಯರ ಧರಣಿ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 1
ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಣೆ ಖಾಸಗೀಕರಣ ಬೇಡ, ವೇತನ ಹೆಚ್ಚಳ, ಪಿಂಚಣಿ ಸೌಲಭ್ಯ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಟ್ಟಣದಲ್ಲಿ ಶನಿವಾರ ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಪ್ರತಿಭಟನೆ ನಡೆಸಿದರು.
ಎಐಟಿಯುಸಿ ಮುಖಂಡ ಎಂ. ವೀರಣ್ಣ ಮಾತನಾಡಿ, ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು. ಈಗ ಸರ್ಕಾರದಿಂದ ನೀಡುತ್ತಿರುವ ವೇತನ ಸಕಾಲಕ್ಕೆ ಸಂದಾಯವಾಗಬೇಕು. ಮಾಸಿಕ ರು. 12 ಸಾವಿರಕ್ಕೂ ಹೆಚ್ಚು ವೇತನ ನಿಗದಿಗೊಳಿಸಬೇಕೆಂದು ಒತ್ತಾಯಿಸಿದರು.
ಇಲ್ಲಿನ ಗಾಂಧೀಜಿ ಚಿತಾಭಸ್ಮ ಹುತಾತ್ಮರ ಸ್ಮಾರಕದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ತಹಸೀಲ್ದಾರ್ ಕಚೇರಿಗೆ ಆಗಮಿಸಿ ಶಿರಸ್ತೇದಾರ್ ವಿಜಯಕುಮಾರ್ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕರ ಫೆಡರೇಷನ್ ಅಧ್ಯಕ್ಷೆ ಎನ್. ರತ್ಮಮ್ಮ, ಜಿ. ಬಸಮ್ಮ, ಬಿ. ರುದ್ರಮ್ಮ, ಟಿ.ಕೆ. ವಿನೋದಾ, ಕೆ. ರಾಮಕ್ಕ, ಕೆ. ಶಾರದಾ, ಪಿ. ಶಾರದಾ, ಬಿ. ಮಹಂತಮ್ಮ, ಶಕುಂತಲಾ, ಎನ್. ಸುಮಾ ಸೇರಿದಂತೆ ತಾಲೂಕಿನ ನೂರಾರು ಕಾರ್ಯಕರ್ತೆಯರು ಇದ್ದರು.