ಕಾಡಾ ನೇಮಕ ಅಕ್ರಮ: ಶೀಘ್ರ ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಮುನಿರಾಬಾದ್, ಡಿ. 1
ಇಲ್ಲಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ತನಿಖಾ ಸಮಿತಿ ನೀಡಿದ ವರದಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸುಮಾರು ಎರಡು ವರ್ಷಗಳಿಂದ ಮುಚ್ಚಿಟ್ಟು, ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾದ ಇಬ್ಬರು ಅಧಿಕಾರಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಕರವೇ (ಪ್ರವೀಣ ಶೆಟ್ಟಿ ಬಣ) ಆರೋಪಿಸಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಕೊಪ್ಪಳ ಕರವೇ ತಾಲೂಕು ಘಟಕದ ಅಧ್ಯಕ್ಷ ವಿಜಯಕುಮಾರ ಮುನಿರಾಬಾದಿನಲ್ಲಿ ಮನವಿ ನೀಡಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಕಾಡಾದಲ್ಲಿ ಹಿಂದೆ ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದ ವಲೀಷ ಹಾಗೂ ಸಹಾಯಕ ಅಭಿಯಂತ ಸೈಯದ್‌ಷಂ ಷಾಲಂ ಹುಸೇನಿ ಅವರ ನೇಮಕಾತಿ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂದಿನ ಕಾಡಾ ಆಡಳಿತಾಧಿಕಾರಿ ಸುದರ್ಶನ್ ಅವರು, ಕಾಡಾ ಅಧೀಕ್ಷಕ ಅಭಿಯಂತ ಮುರಳೀಧರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚಿಸಿದ್ದರು. ಸಮಿತಿ ಸುಮಾರು 7 ತಿಂಗಳ ಕಾಲ ಸಮಗ್ರ ತನಿಖೆ ನಡೆಸಿ ಅ. 11, 2011ರಂದು ವರದಿ ನೀಡಿತ್ತು.
ವರದಿಯಲ್ಲೇನಿತ್ತು?: ಕಾಡಾದಲ್ಲಿ ಕಾರ್ಯಪಾಲಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿರುವ ವಲೀಷ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಸೈಯದ್‌ಷಂ ಷಾಲಂ ಹುಸೇನಿ ನೇಮಕಾತಿ ಅಕ್ರಮವಾಗಿದ್ದು, ಅವರಿಗೆ ನೀಡಿದ ಪದೋನ್ನತಿಗೂ ಅವರು ಅರ್ಹರಲ್ಲ. ಕಾರಣ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ತನಿಖಾ ಸಮಿತಿ ಕಾಡಾ ಆಡಳಿತಾಧಿಕಾರಿಗಳಿಗೆ ವರದಿ ನೀಡಿತ್ತು.
ಆದರೆ ತನಿಖಾ ಸಮಿತಿ ವರದಿಯನ್ವಯ ಈ ವರೆಗೂ ಕ್ರಮ ಕೈಗೊಂಡಿಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ಎಚ್ಚರಿಕೆ ನೀಡಿದೆ.
ಕರವೇ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಬೀಬಿಜಾನ್, ತಾಲೂಕು ಘಟಕದ ಉಪಾಧ್ಯಕ್ಷ ನವಾಬ್‌ಸಾಬ್, ಗ್ರಾಮೀಣ ಘಟಕದ ಅಧ್ಯಕ್ಷ ಸ್ವಾಮಿನಾಥನ್ ಉಪಸ್ಥಿತರಿದ್ದರು.