ಮಗಳೊಂದಿಗೆ ಗೃಹಿಣಿ ಕಾಣೆ
ಬಳ್ಳಾರಿ: ಇಲ್ಲಿನ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾರ್ಥ ಕಾಲೋನಿಯಿಂದ ತನ್ನ ಮಗಳೊಂದಿಗೆ ಗೃಹಿಣಿಯೋರ್ವಳು ಕಾಣೆಯಾಗಿರುವ ಘಟನೆ ಜರುಗಿದೆ. ಭಾರತಿ (20) ಎಂಬ ಗೃಹಿಣಿ ತನ್ನ ಮಗಳು ಜಯಶ್ರೀ (2)ಯೊಂದಿಗೆ ಕಾಣೆಯಾಗಿದ್ದು, ಈಕೆಯು ನವೆಂಬರ್ 24ರಂದು ಬೆಳಗ್ಗೆ 9 ಗಂಟೆಗೆ ತನ್ನ ಅತ್ತೆಯೊಂದಿಗೆ ಜಗಳವಾಡಿ ಮಗಳನ್ನು ಕರೆದುಕೊಂಡು ತವರು ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ದೂರು ದಾಖಲಾಗಿದೆ. ಕಾಣೆಯಾದ ಗೃಹಿಣಿ 4.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕಪ್ಪು ಬಣ್ಣದ ಸೀರೆ ಧರಿಸಿರುತ್ತಾಳೆ. ಈ ಮಹಿಳೆ ಕುರಿತು ಮಾಹಿತಿ ದೊರೆತಲ್ಲಿ ಕೂಡಲೇ ಠಾಣೆಗೆ ತಿಳಿಸಬೇಕೆಂದು ಅಥವಾ ದೂ.ಸಂ-258100-272192, ಮೊ. ಸಂ-9480803082ನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ವೃದ್ಧೆ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ: ಸ್ಥಳೀಯ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಿಂದ ವೃದ್ಧೆಯೋರ್ವಳು ಕಾಣೆಯಾಗಿದ್ದಾಳೆ. ಗುಂತಕಲ್ಲು ಈರಮ್ಮ (80) ಕಾಣೆಯಾದ ವೃದ್ಧೆ. ಈಕೆಯು ನವೆಂಬರ್ 29ರಂದು ಬೆಳಗ್ಗೆ 7 ಗಂಟೆಗೆ ವೆಂಕಟೇಶ್ವರ ಕಾಲನಿಯಿಂದ ಕಾಣೆಯಾಗಿದ್ದಾಳೆ. ಸಿಂಧನೂರಿನಿಂದ ತನ್ನ ಸಂಬಂಧಿಕರ ಮದುವೆಗೆಂದು ಮಗನೊಂದಿಗೆ ಬಂದಿದ್ದ ಈಕೆಗೆ ಸ್ವಲ್ಪ ಮತಿಭ್ರಮಣೆಯಾಗಿರುತ್ತದೆ. 5 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕೆಂಪು ಬಣ್ಣದ ಸೀರೆ ಧರಿಸಿರುತ್ತಾಳೆ. ಈಕೆಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಕೂಡಲೆ ಠಾಣೆಗೆ ತಿಳಿಸಬೇಕೆಂದು ಅಥವಾ ದೂ.ಸಂ-258100-272192, ಮೊ.ಸಂ-9480803082ನ್ನು ಸಂಪರ್ಕಿಸಬೇಕೆಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಪಡಿತರ ಅಕ್ಕಿ ಸಾಗಾಟ: 11.5 ಟನ್ ವಶ
ಹೊಸಪೇಟೆ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ, 11.5 ಟನ್ ಪಡಿತರ ಅಕ್ಕಿ ವಶಪಡಿಸಿಕೊಂಡಿರುವ ಘಟನೆ ಶನಿವಾರ ಹೊಸಪೇಟೆ ನಗರದಲ್ಲಿ ನಡೆದಿದೆ. ನಗರದ ಕೆಎಲ್‌ಎಸ್ ಕಲ್ಯಾಣ ಮಂಟಪದ ಎದುರುಗಡೆ ಲಾರಿಯನ್ನು ಹೊಸಪೇಟೆ ಇನ್‌ಸ್ಪೆಕ್ಟರ್ ಶ್ರೀಧರ ದೊಡ್ಡ ಅವರು ದಾಳಿ ಮಾಡಿ, ಲಾರಿಯಲ್ಲಿ ಸಾಗಾಣಿಕೆ ಮಾಡುತ್ತಿದ್ದ ರು. 1.15 ಲಕ್ಷ ಮೌಲ್ಯದ 50 ಕೆಜಿಯ 230 ಚೀಲ ಅಕ್ಕಿ ವಶಪಡಿಸಿಕೊಂಡಿದ್ದಾರೆ. ಸುಬ್ರಮಣಿ ವಿರುದ್ಧ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಷ ಸೇವಿಸಿ ಯುವಕ ಆತ್ಮಹತ್ಯೆ
ಕೊಟ್ಟೂರು: ಜೀವನದಲ್ಲಿ ಜಿಗುಪ್ಸೆ ಹೊಂದಿದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ಸಂಜೆ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಜಾಮಿಯಾ ಮಸೀದಿಯ ಪ್ರದೇಶದ ನಿವಾಸಿ ಇಮಾಮ್ (30) ಆತ್ಮಹತ್ಯೆಗೆ ಶರಣಾದ ಯುವಕ. ತೇರುಬಯಲು ಪ್ರದೇಶದಲ್ಲಿ ಚಪ್ಪಲಿ ಅಂಗಡಿಯೊಂದನ್ನು ನಡೆಸುತ್ತಿದ್ದ ಈತ, ಇತ್ತೀಚಿನ ದಿನಗಳಲ್ಲಿ ಖಿನ್ನತೆಗೆ ಒಳಗಾಗಿದ್ದನೆಂದು ಕುಟುಂಬದವರು ಹೇಳಿದರು. ಶನಿವಾರ ಸಂಜೆ ವಿಷದ ಬಾಟಲಿ ಖರೀದಿಸಿ ವಿಷ ಸೇವಿಸಿದ್ದಾನೆ. ಕೂಡಲೆ ಆತನನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಈ ಕುರಿತು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.