ಲಿಂಗಪತ್ತೆ ಕಾನೂನು ಬಾಹಿರ: ನ್ಯಾ. ಲಕ್ಷ್ಮೀಕಾಂತ ಮಿಸ್ಕಿನ್
ಸಿರುಗುಪ್ಪ: ಮಗುವಿನ ಆರೋಗ್ಯ ಮತ್ತು ಬೆಳವಣಿಗೆ ಗಮನಿಸಲು ಉಪಯೋಗಿಸುವ ಯಂತ್ರದಿಂದ ಲಿಂಗ ಪತ್ತೆ ಮಾಡಿ, ಹೆಣ್ಣು ಮಗುವನ್ನು ಭೂಮಿಗೆ ಬರುವ ಮುನ್ನ ಹತ್ಯೆ ಮಾಡುವುದು ಕಾನೂನಿಗೆ ವಿರುದ್ಧ ಎಂದು ಸಿವಿಲ್ ನ್ಯಾಯಾಧೀಶ ಲಕ್ಷ್ಮೀಕಾಂತ ಜಾನಕಿರಾಮ ಮಿಸ್ಕಿನ್ ತಿಳಿಸಿದರು. ಪಟ್ಟಣದ ಸರ್ಕಾರಿ ನೌಕರರ ಸಂಘದಲ್ಲಿ ಆರೋಗ್ಯ ಇಲಾಖೆ ಹಾಗೂ ವಕೀಲರ ಸಂಘ ಆಯೋಜಿಸಿದ್ದ ಭ್ರೂಣಲಿಂಗ ಪತ್ತೆ ಕಾನೂನು ಬಾಹಿರ ಹಾಗೂ ಹೆಣ್ಣು ಮಗು ಉಳಿಸಿ ಅಂದೋಲನದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ವೈಜ್ಞಾನಿಕ ರಂಗದಲ್ಲಿ ನೂತನ ತಂತ್ರಜ್ಞಾನಗಳನ್ನು ಕಂಡುಹಿಡಿಯುವ ಮುನ್ನ ನಿತ್ಯವೂ ಗರ್ಭದಲ್ಲಿ ಮಗುವಿನ ಬೆಳವಣಿಗೆ ಹಾಗೂ ಇತರೆ ಯಾವುದೇ ಮಾಹಿತಿ ಇಲ್ಲದೆ ಗರ್ಭಪಾತ ಹಾಗೂ ಕೆಲ ಬಾರಿ ಬಾಣಂತಿ ಸಾವುಗಳು ಸಂಭವಿಸುತ್ತಿದ್ದವು. ಈ ತೊಂದರೆಯಿಂದ ಹೊರಬರಲು ಗರ್ಭದಲ್ಲಿ ಮಗುವಿನ ಬೆಳವಣಿಗೆ ಗಮನಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ತಾಯಿ ಹಾಗೂ ಮಗುವನ್ನು ರಕ್ಷಿಸುವ ನಿಟ್ಟಿನಲ್ಲಿ ಜಾರಿಗೆ ಬಂದ ಸ್ಕ್ಯಾನಿಂಗ್ ಯಂತ್ರ ಆರಂಭದಲ್ಲಿ ಉತ್ತಮ ಪ್ರಯೋಜನಕ್ಕಾಗಿ ಬಳಕೆಯಾಗಿ ಪ್ರಾಣಗಳ ರಕ್ಷಣೆ ಮಾಡಿತ್ತು. ಆದರೆ ಅದನ್ನು ದುರುಪಯೋಗಪಡಿಸಿಕೊಂಡು ಲಿಂಗಪತ್ತೆ ಮಾಡುವ ಮೂಲಕ ಹೆಣ್ಣು ಭ್ರೂಣಗಳನ್ನು ಗರ್ಭದಲ್ಲಿಯೇ ಹತ್ಯೆ ಮಾಡುವ ಮೂಲಕ 1994ರ ವೇಳೆಗೆ ಲಿಂಗಾನುಪಾತದಲ್ಲಿ ಭಾರಿ ಬದಲಾವಣೆಯಾಯಿತು. ಇದನ್ನು ಮನಗಂಡು ಸ್ಕ್ಯಾನಿಂಗ್ ಯಂತ್ರದಲ್ಲಿ ಲಿಂಗಪತ್ತೆ ಹಾಗೂ ಭ್ರೂಣ ಹತ್ಯೆಯನ್ನು ಕಾನೂನು ವಿರೋಧಿ ಎಂದು ಪರಿಗಣಿಸಿ ಹಾಗೂ ತಪ್ಪು ಮಾಡಿದವರಿಗೆ ಮೊದಲಿಗೆ 3 ವರ್ಷ ಶಿಕ್ಷೆ ನಂತರ ಅದೇ ತಪ್ಪನ್ನು ಮುಂದುವರೆಸಿದರೆ ಶಾಶ್ವತ ಜೈಲುವಾಸ ಶಿಕ್ಷೆ ನೀಡುವ ಕಾನೂನು ಜಾರಿಗೆ ತರಲಾಯಿತು. ಹೆಣ್ಣಾಗಲಿ ಗಂಡಾಗಲಿ ಮನೆಯಲ್ಲಿ ಮಕ್ಕಳು ಇರಲಿ ಎಂಬ ಭಾವನೆಯಿಂದ ಹೆಣ್ಣು ಭ್ರೂಣಹತ್ಯೆ ಮಾಡಬಾರದು ಎಂದು ತಿಳಿಸಿದರು. ಸರ್ಕಾರಿ ಆಭಿಯೋಜಕ ಮಂಜುನಾಥ ಬೆರ್ಗಿ, ವಕೀಲರ ಸಂಘದ ಅಧ್ಯಕ್ಷ ಕೆ. ವೀರೇಶಗೌಡ, ತಾಲೂಕು ವೈದ್ಯಾಧಿಕಾರಿ ಡಾ. ವೀರೇಂದ್ರಕುಮಾರ್, ವೈದ್ಯೆ ಡಾ.ಎಲ್. ನಂದಿನಿ, ಡಾ. ಪ್ರಭಾವತಿ, ಡಾ. ಮಾಧವಿಲತಾ, ಸಿಡಿಪಿಇಒ ಸಯ್ಯದ್‌ಚಾಂದ್‌ಪಾಷಾ, ಉಪ ತಹಸೀಲ್ದಾರ್ ಬಿ. ಮಲ್ಲೇಶಪ್ಪ, ವಕೀಲರಾದ ಜಿ.ಬಿ. ಗುಂಡಳ್ಳಿ, ಎ. ಶಿವರುದ್ರಗೌಡ, ಮಲ್ಲಿಗೌಡ, ಹುಸೇನ್ ನಾಯಕ ಹೆಣ್ಣು ಭ್ರೂಣ ಹತ್ಯೆ ಹಾಗೂ ಕಾನೂನಿನ ಮಾಹಿತಿ ತಿಳಿಸಿದರು.