ಅಸ್ತಿತ್ವ: ಎಂಪಿ ಕ್ಷೇತ್ರಕ್ಕೆ ಶ್ರೀರಾಮುಲು?
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 2
ಜಿಲ್ಲೆಯ ಬಹುತೇಕ ವಿಧಾನಸಭಾ ಕ್ಷೇತ್ರಗಳು, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರ ಕಳೆದುಕೊಂಡಿರುವ ಶ್ರೀರಾಮುಲು ಹಾಗೂ ರೆಡ್ಡಿ ಪಾಳಯ ಬಳ್ಳಾರಿ ಲೋಕಸಭಾ ಸ್ಥಾನವನ್ನಾದರೂ ಉಳಿಸಿಕೊಳ್ಳಲು ಶತಾಯ ಗತಾಯ ಪ್ರಯತ್ನ ಮಾಡಲಿದೆ.
ಇಂತಹದೊಂದು ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ಇದೀಗ ಶುರುವಾಗಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಬಳ್ಳಾರಿ ಲೋಕಸಭಾ ಸ್ಥಾನವನ್ನು ಉಳಿಸಿಕೊಂಡರೆ ಮಾತ್ರ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರಿಗೆ ಜಿಲ್ಲೆಯ ಮಟ್ಟಿಗೆ ಭವಿಷ್ಯದ ರಾಜಕೀಯದ ಏಳಿಗೆ ಮೆಟ್ಟಿಲಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಹಿನ್ನಡೆ: 2008ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರ ನೇತೃತ್ವದಲ್ಲಿ ಬಿಜೆಪಿ ಜಿಲ್ಲೆಯ 9 ವಿಧಾನಸಭಾ ಸ್ಥಾನಗಳ ಪೈಕಿ ಸಂಡೂರು ಹೊರತುಪಡಿಸಿ 8 ಕ್ಷೇತ್ರಗಳಲ್ಲಿ ಗೆಲವು ಸಾಧಿಸಿತ್ತು. ಆದರೆ 2013ರಲ್ಲಿ ಬಿಎಸ್ಸಾರ್ ಪಾರ್ಟಿಯ ಶ್ರೀರಾಮುಲು ನೇತೃತ್ವದ ಪಡೆ ಕೇವಲ ಬಳ್ಳಾರಿ ಗ್ರಾಮೀಣ ಮತ್ತು ಕಂಪ್ಲಿ ಕ್ಷೇತ್ರದಲ್ಲಿ ಮಾತ್ರ ಗೆಲವು ಸಾಧಿಸಲು ಸಾಧ್ಯವಾಯಿತು. ಇದರಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುವಂತಾಗಿತ್ತು. ಹೀಗಾಗಿಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅಸ್ತಿತ್ವ ಕಾಯ್ದುಕೊಳ್ಳಲು ಶ್ರೀರಾಮುಲು ಶತಾಯಗತಾಯ ಪ್ರಯತ್ನ ನಡೆಸುವುದಂತೂ ಖಚಿತ ಎನ್ನುವ ಮಾತುಗಳೇ ಚಾಲ್ತಿಯಲ್ಲಿವೆ.
ಶ್ರೀರಾಮುಲುಗೆ ಬಿಜೆಪಿ ಟಿಕೆಟ್ ಕಾಯ್ದಿರಿಸಿದೆಯೇ?: ಶ್ರೀರಾಮುಲು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಸ್ಥಳೀಯ ಬಿಜೆಪಿ ವಲಯದಲ್ಲಿ ಬಹುವಾಗಿ ಕೇಳಿ ಬರುತ್ತಿವೆ. ಒಂದು ವೇಳೆ ಶ್ರೀರಾಮುಲು ಬಿಜೆಪಿಗೆ ಮರಳಿದರೆ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಅವರೇ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಬಿಜೆಪಿಯಲ್ಲಿಯೇ ಕೇಳಿಬರುತ್ತಿವೆ. ಸದ್ಯದ ಮಟ್ಟಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎಂ.ಎಸ್. ಸೋಮಲಿಂಗಪ್ಪ ಅವರ ಹೆಸರು ಇದೆ. ಇನ್ನು ಕಟೌಟ್ಗಳಲ್ಲಿ ಬಿಜೆಪಿ ಅಭ್ಯರ್ಥಿಯೆಂದು ಹಾಕಿಕೊಂಡಿದ್ದ ಗಾದಿಲಿಂಗಪ್ಪ ಅವರೂ ಇದ್ದಾರೆ. ಶ್ರೀರಾಮುಲು ಬಿಜೆಪಿಗೆ ಬಂದರೆ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಬಳ್ಳಾರಿ ಕ್ಷೇತ್ರಕ್ಕೆ ಶ್ರೀರಾಮುಲು ಅಭ್ಯರ್ಥಿ: ಬಳ್ಳಾರಿ ಲೋಕಸಭಾ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರಿಂದ ಶ್ರೀರಾಮುಲು ಬಿಜೆಪಿಗೆ ಸೇರಲಿ ಅಥವಾ ಬಿಎಸ್ಸಾರ್ನಲ್ಲೇ ಉಳಿಯಲಿ. ಆದರೆ ಬಳ್ಳಾರಿ ಲೋಕಸಭಾ ಕ್ಷೇತ್ರ ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ ಶ್ರೀರಾಮುಲು ಅವರೇ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಇತರರನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ಗೆ ಪೈಪೋಟಿ ಒಡ್ಡುವುದು ಕಷ್ಟ. ಹೀಗಾಗಿ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ.
ಪ್ರಸ್ತುತ ಶ್ರೀರಾಮುಲು ಅವರ ಸಹೋದರಿ ಜೆ. ಶಾಂತಾ ಸಂಸದೆ. ಬಳ್ಳಾರಿ ಲೋಕಸಭಾ ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟು ಕೊಡದೆ, ತಮ್ಮಲ್ಲಿಯೇ ಉಳಿಸಿಕೊಂಡರೆ ಮಾತ್ರ ರಾಜಕೀಯದಲ್ಲಿ ಶ್ರೀರಾಮುಲುಗೆ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಅವರ ಪಾಳಯದಲ್ಲಿದೆ.
ಗ್ರಾಮೀಣ ಕ್ಷೇತ್ರಕ್ಕೆ ಉಪ ಚುನಾವಣೆ?: ಲೋಕಸಭೆ ಚುನಾವಣೆಯಲ್ಲಿ ಶ್ರೀರಾಮುಲು ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದ್ದು, ಶ್ರೀರಾಮುಲು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಬಹುದು. ಇತ್ತೀಚೆಗೆ ಬಳ್ಳಾರಿಗೆ ಆಗಮಿಸಿದ್ದ ಈಶ್ವರಪ್ಪ ಅವರನ್ನು ಬಿಎಸ್ಸಾರ್ ಮುಖಂಡ ಗುರುಲಿಂಗನಗೌಡ ಅವರು ನಿವಾಸದಲ್ಲಿ ಶ್ರೀರಾಮುಲು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಶ್ರೀರಾಮುಲು ಬಿಜೆಪಿಗೆ ಮರಳುವ ಗುಸುಗುಸು ಸುದ್ದಿಗೆ ರೆಕ್ಕೆಪುಕ್ಕ ಬಂದಿದೆ. ಶ್ರೀರಾಮುಲು ಸೇರ್ಪಡೆ ವಿಷಯ ರಾಷ್ಟ್ರೀಯ ನಾಯಕರಿಗೆ ತಿಳಿಸಿದ್ದು, ಅವರ ತೀರ್ಮಾನಕ್ಕೆ ಬಿಟ್ಟಿದ್ದೇವೆ ಎನ್ನುವ ಈಶ್ವರಪ್ಪನವರ ಮಾತುಗಳು ಶ್ರೀರಾಮುಲು ಸೇರ್ಪಡೆಗೆ ರಾಜ್ಯ ಬಿಜೆಪಿ ನಾಯಕರಲ್ಲಿ ಒಲವಿದೆ ಎಂಬುದನ್ನು ಪರೋಕ್ಷವಾಗಿ ಬಹಿರಂಗ ಪಡಿಸಿದಂತಾಗಿದೆ.
ಕೈಗೆ ಪ್ರಬಲ ಪೈಪೋಟಿ: ಕಾಂಗ್ರೆಸ್ ಅಲೆಯಿಂದಾಗಿ ಜಿಲ್ಲೆಯಲ್ಲಿ 2013ರ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದಂತಾಗಿದೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೂ ಪಕ್ಷದ ಮುಖಂಡರ ಒಳ ಜಗಳದಿಂದ ಅಲ್ಪ ಹಿನ್ನಡೆ ಸಾಧ್ಯತೆ ಇದೆ. ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಶ್ರೀರಾಮುಲು ಕಾಂಗ್ರೆಸ್ಗೆ ಪ್ರಬಲ ಪೈಪೋಟಿ ನೀಡುವುದರಲ್ಲಿ ಎರಡು ಮಾತಿಲ್ಲ. ಕಾಂಗ್ರೆಸ್ ತನ್ನ ವೈಮನಸ್ಸುಗಳನ್ನು ಬಿಟ್ಟು, ಒಗ್ಗಟ್ಟಿನಿಂದ ಬಲಪ್ರದರ್ಶನ ಮಾಡಿದರೆ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಹೆಜ್ಜೆ ಇಡಲು ಸಾಧ್ಯ. ಶ್ರೀರಾಮುಲು ಅಸ್ತಿತ್ವದ ಹೋರಾಟ, ಲೋಕಸಭೆ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಕಾಂಗ್ರೆಸ್ನ ಹಂಬಲದಲ್ಲಿ ಯಾರು ಯಶಸ್ವಿಯಾಗುತ್ತಾರೋ ಕಾದುನೋಡಬೇಕು.
-ಶಶಿಧರ ಮೇಟಿ