ವಸತಿ ಸೌಲಭ್ಯಕ್ಕೆ ಒತ್ತಾಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 2
ಜಿಲ್ಲೆಯ ಅನೇಕ ಬಡಜನತೆ ನಿವೇಶನವಿಲ್ಲದೆ ಬದುಕು ಸಾಗಿಸುತ್ತಿದ್ದು, ನಿವೇಶನ ಮತ್ತು ವಸತಿ ಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ಕ್ರಮವನ್ನು ಖಂಡಿಸಿ, ಅಖಿಲ ಭಾರತ ಯುವಜನ ಫೆಡರೇಷನ್ನ ಸಾವಿರಾರು ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.
ಅಖಿಲ ಭಾರತ ಯುವಜನ ಫೆಡರೇಷನ್ನ ಜಿಲ್ಲಾಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಜಿಲ್ಲೆಯ ಬಳ್ಳಾರಿ, ಸಂಡೂರು, ಸಿರುಗುಪ್ಪ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ವಾಸವಾಗಿರುವ ನಿವೇಶನ, ವಸತಿ ರಹಿತ ಲಕ್ಷಾಂತರ ಬಡ ಜನರು, ನಿವೇಶನ, ವಸತಿ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಆಯಾ ಗ್ರಾಪಂ, ಪಾಲಿಕೆಗಳಿಗೆ ಅರ್ಜಿ ಕೊಟ್ಟಿದ್ದಾರೆ. ಆದರೆ, ಅರ್ಜಿ ಸಲ್ಲಿಸಿ ಈಗಾಗಲೇ ವರ್ಷಗಳೇ ಕಳೆದಿದ್ದರೂ, ಅಧಿಕಾರಿಗಳು ಮಾತ್ರ ಬಡ ಜನರಿಗೆ ನಿವೇಶನ, ವಸತಿ ಸೌಲಭ್ಯ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಹಲವು ಬಾರಿ ಪ್ರತಿಭಟನೆ ಹಮ್ಮಿಕೊಂಡಿದ್ದರೂ, ಎಚ್ಚೆತ್ತುಕೊಳ್ಳುತ್ತಿಲ್ಲ. ಈ ವಿಷಯವನ್ನು ಜಿಲ್ಲಾಧಿಕಾರಿ ಗಂಭೀರವಾಗಿ ಪರಿಗಣಿಸಿ, ಜಿಲ್ಲೆಯ ಎಲ್ಲ ಬಡಜನತೆಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಬೇಕು. ಅಲ್ಲದೆ, ಕಾಲುವೆ, ಚರಂಡಿ ರಸ್ತೆ ಪಕ್ಕದಲ್ಲಿ ವಾಸವಿರುವ ಜನರಿಗೂ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಳ್ಳಾರಿ, ಸಂಡೂರು, ಸಿರುಗುಪ್ಪ ತಾಲೂಕುಗಳ ಸಂಗನಕಲ್ಲು, ಕೊಳಗಲ್ಲು, ವದ್ದಟ್ಟಿ, ಅಸುಂಡಿ, ಚಾಗನೂರು, ಹೊನ್ನಳ್ಳಿ, ಟಿ. ಬೂದಿಹಾಳ್, ಬುರ್ರನಾಯಕನಹಳ್ಳಿ, ಎತ್ತಿನಬೂದಿಹಾಳ್, ಎಚ್. ಹೊಸಳ್ಳಿ, ಕೂರಿಗನೂರು, ಉಪ್ಪಾರ ಹೊಸಳ್ಳಿ ಸೇರಿದಂತೆ ಇನ್ನಿತರೆ ಹಲವಾರು ಗ್ರಾಮಗಳಿಂದ ಪ್ರತಿಭಟನಾಕಾರರು ಆಗಮಿಸಿದ್ದರು. ಧರಣಿಯಲ್ಲಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಜನತೆ ಬಗ್ಗೆ ನಿರ್ಲಕ್ಷ್ಯ: ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆಯಾ ಗ್ರಾಪಂ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನನ್ನು ಪತ್ತೆ ಹಚ್ಚಿ, ತಹಸೀಲ್ದಾರರ ಗಮನಕ್ಕೆ ತರಲಾಗಿದೆ. ಆದರೂ, ನಿರ್ಲಕ್ಷ್ಯ ವಹಿಸಿರುವ ತಹಸೀಲ್ದಾರ್ ಇತರೆ ಅಧಿಕಾರಿಗಳು, ಸರ್ಕಾರಿ ಜಮೀನು ಇಲ್ಲ ಎಂದು ಹೇಳುತ್ತಿದ್ದಾರೆ. ಜಿಲ್ಲೆಯಲ್ಲಿ ಗ್ರಾಪಂ ವ್ಯಾಪ್ತಿಗಳಲ್ಲಿ ಸರ್ಕಾರಿ ಜಮೀನು ಸಾಕಷ್ಟಿದೆ. ಪರಿಶೀಲನೆ ನಡೆಸದ ಅಧಿಕಾರಿಗಳು, ನೆರೆ ರಾಜ್ಯ, ಜಿಲ್ಲೆಗಳಿಂದ ಬಂದು ರಸ್ತೆ, ಕಾಲುವೆ ಪಕ್ಕದಲ್ಲಿ ವಾಸಿಸುತ್ತಿರುವ ಜನರ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ.
ನಗರ ಪ್ರದೇಶಗಳಲ್ಲಿ ಮನೆ ಬಾಡಿಗೆಯೂ ಅಧಿಕವಾಗಿದ್ದು, ನಿರ್ಗತಿಕರಾದ ಬಡವರು, ದುಡಿದ ಹಣವೆಲ್ಲ ಬಾಡಿಗೆ ಕಟ್ಟಲು ಸಾಲುತ್ತಿಲ್ಲ. ಇದರಿಂದ ಬಡವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸಿದಲ್ಲಿ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ ಎಂದರು.
ನಿವೇಶನ ಒದಗಿಸಿ: ವಸತಿ ರಹಿತ ಬಡ ಜನರಿಗೆ ನಿವೇಶನ ಒದಗಿಸಬೇಕು. ಈಗಾಗಲೇ ನಿಗದಿ ಪಡಿಸಿದ ಗ್ರಾಮಗಳಲ್ಲಿ ಕೂಡಲೇ ಹಂಚಿಕೆ ಆರಂಭಿಸಬೇಕು. ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಭೂಮಿ ಇದ್ದರೆ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಗ್ರಾಮಕ್ಕೆ ಸಮೀಪದ ಭೂಮಿಯನ್ನು ಖರೀದಿಸಿ ಹಂಚಲು ಪರವಾನಗಿ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಕಾರ್ಯದರ್ಶಿ ಎಸ್. ಮೋನಪ್ಪ, ಕೆ. ರವಿಕುಮಾರ್, ನಾಗಭೂಷಣರಾವ್, ಹೊನ್ನಳ್ಳಿ ಈಶ್ವರ್, ಎರ್ರಿಸ್ವಾಮಿ, ಎಂ. ಅಂಜಿನಿ, ಶಂಕರಗೌಡ, ಈರಣ್ಣ, ಪ್ರಭು, ಶಂಕರ್, ದುರುಗಪ್ಪ, ಮಲ್ಲ, ಎ. ಕೃಷ್ಣಮೂರ್ತಿ, ಶಶಿಕುಮಾರ್, ಗುರುಸ್ವಾಮಿ, ಜಾಫರ್ ಶರೀಫ್, ಶೇಖರ್ಬಾಬು, ಪರಶುರಾಮ್, ನೂರಾರು ಮಹಿಳೆಯರು ಇದ್ದರು.
ನಿವೇಶನ, ವಸತಿ ರಹಿತ ಲಕ್ಷಾಂತರ ಬಡ ಜನರು, ನಿವೇಶನ, ವಸತಿ ಸೌಲಭ್ಯಕ್ಕಾಗಿ ಸಂಬಂಧಪಟ್ಟ ಆಯಾ ಗ್ರಾಪಂ, ಪಾಲಿಕೆಗಳಿಗೆ ಅರ್ಜಿ ಕೊಟ್ಟಿದ್ದಾರೆ. ಆದರೆ, ವರ್ಷಗಳೇ ಕಳೆದಿದ್ದರೂ, ಅಧಿಕಾರಿಗಳು ಮಾತ್ರ ಸೌಲಭ್ಯ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
- ಸಂಗನಕಲ್ಲು ಕಟ್ಟೆಬಸಪ್ಪ