ವೈದ್ಯರ ನಿರ್ಲಕ್ಷ್ಯ: ನವಜಾತ ಶಿಶು ಸಾವು
ಹೂವಿನಹಡಗಲಿ: ನವಜಾತ ಶಿಶುವಿಗೆ ಮುಂಜಾಗ್ರತವಾಗಿ ಕಾಮಾಲೆ ಕಾಯಿಲೆ ಚಿಕಿತ್ಸೆ ನೀಡಿದ್ದರಿಂದ ಮಗುವಿನ ತೊಡೆಯಲ್ಲಿ ಬಾವು ಬಂದು ಗಡ್ಡೆ ಬೆಳೆದ ಪರಿಣಾಮ ಮಗು ಸಾವನ್ನಪ್ಪಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಮಗುವಿನ ಪಾಲಕರು ದೂರಿದ್ದಾರೆ.
ತಾಲೂಕಿನ ಬ್ಯಾಲಹುಣ್ಸಿ ಗ್ರಾಮದ ರೇಖಾ ಸುರೇಶ ಎಂಬಾಕೆಗೆ ಕಳೆದ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಪಕ್ಕದ ಕಾಂತೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಗೆ ಬಂದಾಗ ಯಾವೊಬ್ಬ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದ ಕಾರಣ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ.
ಬುಧವಾರ ರಾತ್ರಿ ರೇಖಾಗೆ ಹೆಣ್ಣು ಮಗು ಜನಿಸಿದ್ದು, ಆಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ಶಿವಕುಮಾರ ಮಗುವಿಗೆ ಕಾಮಾಲೆ ಚಿಕಿತ್ಸೆ ನೀಡಿದ್ದಾರೆ. ಹೆರಿಗೆ ಆದ ಕೂಡಲೆ ಬಾಣಂತಿಯನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೆ ಮನೆಗೆ ಕಳುಹಿಸಿದ್ದಾರೆ. ಆದರಿಂದ ಮಗುವಿಗೆ ನೀಡಿರುವ ಚಿಕಿತ್ಸೆಯಿಂದ ತೊಂದರೆ ಉಂಟಾಗಿತ್ತು. ಆಗ ರಾಣೆಬೆನ್ನೂರು ಮಕ್ಕಳ ವೈದ್ಯರ ಬಳಿ ಹೋದಾಗ ಮಗುವಿಗೆ ನೀಡಿರುವ ಚಿಕಿತ್ಸೆಯಿಂದ ತೊಡೆಯಲ್ಲಿ ಕೀವು ಆಗಿದ್ದರಿಂದ ಮಗು ಬದುಕಲು ಸಾಧ್ಯವಿಲ್ಲ ಎಂದಾಗ ಗುರುವಾರ ರಾತ್ರಿ ಮಗು ಸಾವನ್ನಪ್ಪಿದೆ ಎಂದು ಪಾಲಕರು ಆರೋಪಿಸುತ್ತಾರೆ.
ಹೆಸರಿಗೆ 24್ಢ7 ಸೇವೆ: ಸರ್ಕಾರಿ ಆರೋಗ್ಯ ಕೇಂದ್ರಗಳ ಮುಂದೆ 24/7 ಎಂದು ನಾಮಫಲಕ ಹಾಕಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಹೋಗಿ ನೋಡಿದರೆ ವೈದ್ಯರು, ಸಿಬ್ಬಂದಿ ಜಾಗ ಖಾಲಿ ಮಾಡಿರುತ್ತಾರೆ. ರೋಗಿಗಳು ಕಾದು ಕಾದು ಸುಸ್ತಾಗಿ ಹೋಗುತ್ತಾರೆಂದು ಬ್ಯಾಲಹುಣ್ಸಿ ಗ್ರಾಮಸ್ಥರು ದೂರುತ್ತಾರೆ.
ಕಾಂತೆಬೆನ್ನೂರು ಆರೋಗ್ಯ ಕೇಂದ್ರದಲ್ಲಿ ಸರಿಯಾಗಿ ವೈದ್ಯರು ಮತ್ತು ಸಿಬ್ಬಂದಿಗಳಿಲ್ಲದೆ ದೂರದ ಹೊಳಲು ಹಾಗೂ ಹೂವಿನಹಡಗಲಿಗೆ ರೋಗಿಗಳು ಹೋಗಬೇಕಾದ ಅನಿವಾರ್ಯತೆ ಇದೆ.
ಇಲ್ಲಿ ವೈದ್ಯರಿಲ್ಲದ ಕಾರಣ ಹೂವಿನಹಡಗಲಿ ಆಸ್ಪತ್ರೆಯಲ್ಲಿ ಹೆರಿಗೆಯಾದ ರೇಖಾ ಅವರ ಮಗು ಬದುಕಲಿಲ್ಲ. ಇಂತಹ ಅನೇಕ ತೊಂದರೆಗಳಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ಬಂದ ರೋಗಿಗಳಿಗೆ ಸ್ಪಂದಿಸದೇ ಹಣ ಕೀಳುವ ದಂಧೆಯಲ್ಲಿ ತೊಡಗಿದ್ದಾರೆಂದು ಬ್ಯಾಲಹುಣ್ಸಿ ಲಕ್ಷ್ಮಣ (ಪಪ್ಪು) ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ. ಶಿವಕುಮಾರನ್ನು ಸಂಪರ್ಕಿಸಿದಾಗ, ಕಾಮಾಲೆ ರೋಗ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಚಿಕಿತ್ಸೆ ನೀಡಲಾಗಿತ್ತು. ಒಂದೇ ದಿನಕ್ಕೆ ತೊಡೆಯಲ್ಲಿ ಬಾವು ಹಾಗೂ ಕೀವು ಬರಲು ಸಾಧ್ಯವಿಲ್ಲ, ಬೇರೊಂದು ಕಾರಣದಿಂದ ಮಗು ಸಾವನ್ನಪ್ಪಿರಬಹುದು ಎಂದು ಹೇಳುತ್ತಾರೆ.