ಸೌಲಭ್ಯದಿಂದ ವಂಚಿತರಾಗದಿರಲು 371 ಜಾರಿ: ಡಾ. ರಜಾಕ್ ಉಸ್ತಾದ್
ಬಳ್ಳಾರಿ: ಯಾವುದೇ ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆ ಹಾಗೂ ಸೌಲಭ್ಯಗಳಿಂದ ವಂಚಿತವಾಗಬಾರದೆಂಬ ಉದ್ದೇಶದಿಂದ ವಿಶೇಷ ಸೌಲಭ್ಯ ಕಲ್ಪಿಸಲು ಸಂವಿಧಾನ ರಚನಾ ವೇಳೆ 371ನೇ ಕಲಂನಡಿ ಅವಕಾಶ ನೀಡಲಾಗಿದೆ ಎಂದು ರಾಯಚೂರಿನ ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್ ಅಭಿಪ್ರಾಯಪಟ್ಟರು.
ನಗರದ ವಿಎಸ್ಕೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ 371 (ಜೆ) ಸಂವಿಧಾನ ತಿದ್ದುಪಡಿ ಮತ್ತು ಹೈದರಾಬಾದ್ ಕರ್ನಾಟಕ ಭವಿಷ್ಯ ಎಂಬ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಅಸಮಾನತೆ ಹೋಗಲಾಡಿಸುವಲ್ಲಿ ಆ ಪ್ರದೇಶಕ್ಕೆ ವಿಶೇಷ ಸೌಲಭ್ಯ, ಅನುದಾನ ನೀಡಲು ಸಂವಿಧಾನದ 371ನೇ ಕಲಂನಡಿ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಹೀಗಾಗಿ ರಾಜ್ಯದ ಹೈಕ ಪ್ರದೇಶಕ್ಕೆ 371(ಜೆ) ಕಲಂನಡಿ ವಿಶೇಷ ಸೌಲಭ್ಯ ನೀಡಲಾಗಿದೆ. ತಿದ್ದುಪಡಿಯಾದ ನಂತರ ಈ ಭಾಗದ ಜನರ ಜವಾಬ್ದಾರಿ ಹೆಚ್ಚಾಗಿದೆ. ಕಾವಲು ಸಮಿತಿ ರಚಿಸಿ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಗೊಳ್ಳುವಂತೆ ಎಚ್ಚರ ವಹಿಸಬೇಕಿದೆ ಎಂದರು.
ಮೀಸಲು ವರ್ಗೀಕರಣ: ಉನ್ನತ ಶಿಕ್ಷಣ, ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರೆ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 70ರಷ್ಟು ಸೀಟುಗಳನ್ನು ಹೈಕ ಭಾಗದವರಿಗೆ ಮೀಸಲಿಡಲಾಗಿದ್ದು, ರಾಜ್ಯದ ಇನ್ನುಳಿದ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 8ರಷ್ಟು ಸೀಟುಗಳನ್ನು ಈ ಭಾಗದ ವಿದ್ಯಾರ್ಥಿಗಳಿಗೆ ಲಭಿಸಲಿವೆ. ಗ್ರೂಪ್ ಎ (ಸಿನಿಯರ್ ಸ್ಕೇಲ್) ಮತ್ತು ಗ್ರೂಪ್ ಬಿ ಶೇ. 75ರಷ್ಟು, ಗ್ರೂಪ್ ಸಿ ಶೇ. 80ರಷ್ಟು, ಗ್ರೂಪ್ ಡಿ ಶೇ. 85ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ಮೀಸಲಿಡಲಾಗಿದೆ. ಹೈಕ ಹೊರತುಪಡಿಸಿ ರಾಜ್ಯ ಮಟ್ಟದಲ್ಲಿ ನಡೆಯುವ ಯಾವುದೇ ನೇಮಕಾತಿಗಳಲ್ಲಿ ಶೇ. 8ರಷ್ಟು ಹುದ್ದೆಗಳು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಯಾವ ರೀತಿ ಪರಿಗಣನೆ?: ಸ್ಥಳೀಯ ಮೂಲ ನಿವಾಸಿಗಳಾಗಿದ್ದಲ್ಲಿ, ಪೋಷಕರು ಇಲ್ಲಿಯೇ ಜನಿಸಿರಬೇಕು. ವಲಸಿಗರಾದಲ್ಲಿ ಸುಮಾರು ಹತ್ತು ವರ್ಷ ಈ ಭಾಗದಲ್ಲೇ ವಾಸವಾಗಿರಬೇಕು. ಅಂತಹ ಮಕ್ಕಳೂ ಸಹ ಈ ಭಾಗದಲ್ಲೇ ಹತ್ತು ವರ್ಷ ಶಿಕ್ಷಣ ಪಡೆದಿರಬೇಕು. ಬೇರೆ ಭಾಗದ ಮಹಿಳೆಯರನ್ನು ಈ ಭಾಗದ ಪುರುಷರು ವಿವಾಹವಾದಲ್ಲಿ ಅವರನ್ನು ಈ ಭಾಗದ ನಿವಾಸಿಯೆಂದು ಪರಿಗಣಿಸಲಾಗುವುದೆಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಸೋಮಶೇಖರ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಬಸವರಾಜ ಬೆಣ್ಣಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು. ನಿಂಗಪ್ಪ ಮೇಟಿ ಪ್ರಾರ್ಥಿಸಿದರು. ಡಾ. ಹೊನ್ನೂರ್ ಅಲಿ ನಿರೂಪಿಸಿದರು. ವಿಜಯಕುಮಾರ್ ವಂದಿಸಿದರು.