ಆರೋಪಿಗಳ ಬಂಧನಕ್ಕೆ ಆಗ್ರಹ
ಹೊಸಪೇಟೆ: ಭದ್ರಾವತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿಯ ಅಪ್ರಾಪ್ತ ಬಾಲಕಿ ಪಾರ್ವತಿ ಎಂಬಾಕೆ ಮೇಲೆ ಅತ್ಯಾಚಾರ ನಡೆಸಿ, ಆಕೆಗೆ ಜೀವಬೆದರಿಕೆ ಒಡ್ಡಿ ಗರ್ಭಪಾತ ಮಾಡಿಸಿದ ವಕೀಲ ಎ.ಬಿ. ನಂಜಪ್ಪ, ಲೋಹಿತ್ ಹಾಗೂ ಕಾರ್ತಿಕ್‌ನನ್ನು ಬಂಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ತಹೀಸಲ್ದಾರ್‌ಗೆ ಮನವಿಪತ್ರ ಸಲ್ಲಿಸಿ ಒತ್ತಾಯಿಸಿದರು.
ಡಿಎಸ್‌ಎಸ್ ತಾಲೂಕು ಸಂಚಾಲಕ ಎಚ್. ಗುಂಡಪ್ಪ ಮಾತನಾಡಿ, ಬಾಲಕಿ ಪಾರ್ವತಿ ಮೇಲೆ ಅತ್ಯಾಚಾರ ನಡೆಸಿ ಗರ್ಭಣಿಯನ್ನಾಗಿ ಮಾಡಿದ ಅಪರಾಧಿಗಳಾದ ಕಾರ್ತಿಕ್, ಎ.ಬಿ. ನಂಜಪ್ಪ ಮತ್ತು ಲೋಹಿತ್‌ನನ್ನು ತಕ್ಷಣ ಬಂಧಿಸಬೇಕು. ಗರ್ಭಪಾತ ಮಾಡಿಸಲು ಸಹಕರಿಸಿದ ಸರ್ಕಾರಿ ವೈದ್ಯರನ್ನು ಕೂಡಲೆ ಅಮಾನತು ಮಾಡಬೇಕು. ಅತ್ಯಾಚಾರ ಪ್ರಕರಣ ಮತ್ತು ಗರ್ಭಪಾತ ಮಾಡಿಸಿರುವ ಅಪರಾಧಿಗಳು ಯಾರೆಂದು ಗೊತ್ತಿದ್ದರೂ ಅಪರಾಧಿಗಳಿಗೆ ಸಹಕರಿಸುತ್ತಿರುವ ಪೊಲೀಸ್ ಅಧಿಕಾರಿಗಳಾದ ತಿರುಮಲೇಶ್ ಮತ್ತು ನಾಗಮ್ಮ ಅವರನ್ನು ತಕ್ಷಣ ವಜಾಗೊಳಿಸಬೇಕು. ಬಾಲಕಿ ಪಾರ್ವತಿಗೆ ರು. 5 ಲಕ್ಷ ಪರಿಹಾರ ಹಾಗೂ ಪಾರ್ವತಿ ಮತ್ತು ಆಕೆಯ ಕುಟುಂಬದವರಿಗೆ ಜೀವ ರಕ್ಷಣೆ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ಸಮಿತಿಯ ತಾಲೂಕು ಸಂಘಟನಾ ಸಂಚಾಲಕ ಎನ್. ಶರಣಪ್ಪ, ಮುಖಂಡ ಎಚ್. ಈರಣ್ಣ ಮೆಟ್ರಿ, ಆರ್.ಎಂ. ರಾಮಯ್ಯ, ದೊಡ್ಡಮಾರೆಪ್ಪ, ಎಚ್. ಶಿವಪ್ಪ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.