ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಯಲು ಮೂತ್ರ ವಿಸರ್ಜನೆಗೆ ತಡೆ ಎಂದು?

Lingaraj Badiger
Updated On : 4 Dec 2013, 11:34 am

ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 3
ಬಸ್ ನಿಲ್ದಾಣ ಸದಾ ಸ್ವಚ್ಛ, ಸುಂದರವಾಗಿರಬೇಕೆಂದು ಬಯಸುವ ಪ್ರಯಾಣಿಕರು ಮತ್ತು ನಾಗರಿಕರೆ ವಾಣಿಜ್ಯ ಪಟ್ಟಣ ಕೊಟ್ಟೂರಿನ ಬಸ್ ನಿಲ್ದಾಣದ ಪರಿಸರವನ್ನು ಹಾಳು ಮಾಡಿರುವ ದುರಂತ ಕಥೆ ಇದು.
ಪಟ್ಟಣದ ಆಯಕಟ್ಟಿನ ಸ್ಥಳದಲ್ಲಿ ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬಸ್ ನಿಲ್ದಾಣವನ್ನು ಈಶಾನ್ಯ ಸಾರಿಗೆ ಸಂಸ್ಥೆ ಕಳೆದ ವರ್ಷ ರು. 1.5 ಕೋಟಿ ವೆಚ್ಚದಲ್ಲಿ ಮೂಲ ಸೌಲಭ್ಯಗಳೊಂದಿಗೆ ಆಧುನೀಕರಣಗೊಳಿಸಿ ತಕ್ಕಮಟ್ಟಿಗೆ ಸುಂದರಗೊಳಿಸಿದೆ. ಇಂತಪ್ಪ ಬಸ್ ನಿಲ್ದಾಣವನ್ನು ಒಪ್ಪ, ಓರಣವಾಗಿರಿಸಿಕೊಳ್ಳಲು ಸಾರಿಗೆ ಸಂಸ್ಥೆಯೊಂದಿಗೆ ಕೈಜೋಡಿಸಬೇಕಿದ್ದ ಪ್ರಯಾಣಿಕರು ತಮಗಾಗಿಯೇ ನಿರ್ಮಿಸಿದ ಶೌಚಾಲಯಗಳನ್ನು ಬಳಸದೇ ನಿಲ್ದಾಣ ಪ್ರವೇಶದ ಕೌಂಪೌಂಡ್ ಉದ್ದಕ್ಕೂ ಮೂತ್ರ ವಿಸರ್ಜನೆ ಮಾಡಿ ದುರ್ನಾತ ಬೀರುವಂತೆ ಮಾಡಿದ್ದಾರೆ.
ಸಂಜೆಯಾಗುವುದನ್ನೇ ಕಾಯುವ ಇಲ್ಲಿನ ಕೆಲ ನಾಗರಿಕರು ಮತ್ತು ಪ್ರಯಾಣಿಕರು ಕಾಂಪೌಂಡ್ ಉದ್ದಕ್ಕೂ ಇರುವ ಜಾಗೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಈ ಬಸ್ ನಿಲ್ದಾಣಕ್ಕೆ ದಿನಂಪ್ರತಿ 170ಕ್ಕೂ ಅಧಿಕ ಬಸ್‌ಗಳು ಬಂದು ಹೋಗುತ್ತವೆ. ಬಸ್‌ಗಳಿಂದ ಇಳಿಯುವ ಮತ್ತು ಬಸ್ ಏರುವವರು ದುರ್ವಾಸನೆ ಹೀರಿಕೊಳ್ಳಬೇಕಾದ ಕರ್ಮ ಅನುಭವಿಸಬೇಕಿದೆ. ಕಾಂಪೌಂಡ್ ಮಗ್ಗುಲಲ್ಲಿಯೇ 4 ಹೆಜ್ಜೆ ಸಾಗಿದರೆ ಮೂತ್ರಾಲಯ ಇದ್ದರೂ ಅಲ್ಲಿಗೆ ತೆರಳಲು ಸಿದ್ಧರಿಲ್ಲದೆ ಬಸ್ ನಿಲ್ಲುವ ತಾಣದಲ್ಲಿಯೇ ಅನಕ್ಷರಸ್ಥರಿಗಿಂತಲೂ ಕಡೆಯಾಗಿ ಅಕ್ಷರಸ್ಥರೇ ಕಾಂಪೌಂಡ್ ಮೇಲೆ ಬರೆಯಲಾದ ದಂಡ ವಿಧಿಸುವ ಶಬ್ದವನ್ನು ಲೆಕ್ಕಿಸದೇ ದಿನಂಪ್ರತಿ ಮೂತ್ರ ವಿಸರ್ಜನೆ ಮಾಡುತ್ತಿರುವುದು ನಿಜಕ್ಕೂ ದುರಂತವಾಗಿದೆ. ಈ ಸಂಬಂಧ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಅವರನ್ನೇ ಬೈಯುವ ಉದ್ಧಟತನವ ನ್ನು ಕೆಲವರು ತೋರತೊಡಗಿದ್ದಾರೆ. ಯಾರೊಬ್ಬರೂ ಇತ್ತ ಗಮನಹರಿಸದಿರುವುದು ಪರಿಸ್ಥಿತಿ ಗಂಭೀರ ಹಂತ ತಲುಪುವುದಕ್ಕೆ ಕಾರಣ.
ಈ ಸ್ಥಳವನ್ನು ಸ್ವಚ್ಛಗೊಳಿಸಲು ಎಷ್ಟೇ ಪ್ರಮಾಣದಲ್ಲಿ ನೀರು ಹಾಕಿದರೂ ಹೊಲಸು ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಾಕಷ್ಟು ಹೇಳಿದರೂ ಪ್ರಯಾಣಿಕರು ಮತ್ತು ಕೆಲ ನಾಗರಿಕರು ಕಿವಿಗೆ ಹಾಕಿಕೊಳ್ಳದೇ ಕಾಂಪೌಂಡ್ ಬಳಿಯೇ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಸಂಸ್ಥೆಯ ಹಿರಿಯ ಅಧಿಕಾರಿಗಳಿಂದ ನಾವುಗಳು ತೆಗಳಿಸಿಕೊಳ್ಳಬೇಕಿದೆ. ಪ್ರಜ್ಞಾವಂತರೇ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ನಮಗಂತೂ ಸಾಕಾಗಿ ಹೋಗಿದೆ ಎಂದು ಬಸ್ ನಿಲ್ದಾಣದ ಸಂಚಾರ ನಿಯಂತ್ರಕ ಜಿ. ಈಶಪ್ಪ ತಮ್ಮ ಅಳಲ ತೋಡಿಕೊಳ್ಳುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement