ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಯಾಗಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 3
ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ ಪ್ರತಿಪಾದಿಸಿದರು.
ಸಂಸ್ಕೃತಿ ಪ್ರಕಾಶನ ಮತ್ತು ಜ್ಞಾನ ಜ್ಯೋತಿ ಮಹಾವಿದ್ಯಾಲಯ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ 58ನೇ ಕರ್ನಾಟಕ ರಾಜ್ಯೋತ್ಸವ ಮತ್ತು 3ನೇ ಸಂಸ್ಕೃತಿ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಕಾನೂನು ಶಾಲೆ ತಜ್ಞರ ತಂಡ ಮಂಡಿಸಿರುವ ಮೂಢನಂಬಿಕೆ ಪ್ರತಿಬಂಧಕ ಕರಡನ್ನು ಅಧ್ಯಯನ ಮಾಡದೆ ಕೆಲವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ನಂಬಿಕೆ ಎಂದರೆ ಬೆಳೆಯಿದ್ದಂತೆ, ಬೆಳೆ ಜತೆ ಸೇರಿರುವುದು ಕಳೆ ಎಂಬ ಮೂಢನಂಬಿಕೆ. ಕಳೆಯನ್ನು ಹೋಗಲಾಡಿಸಿದರೆ ಬೆಳೆ ಸಮೃದ್ಧವಾಗಿರುತ್ತದೆ. ನಂಬಿಕೆಯನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಪಟ್ಟಭದ್ರರ ಬಗ್ಗೆ ಎಚ್ಚರದಿಂದ ಇರಬೇಕು. ಜನತೆಯಲ್ಲಿ ಮೌಢ್ಯ, ಕಂದಾಚಾರವನ್ನು ಹೋಗಲಾಡಿಸಿದರೆ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದರು.
ರಂಗ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣ ಮಾತನಾಡಿ, ಭಾರತೀಯ ಸಂಸ್ಕೃತಿ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಿಲ್ಲ. ಆದರೆ ಕೆಲವರು ತಮ್ಮ ಸ್ವಾರ್ಥಕ್ಕಾಗಿ, ಹೊಟ್ಟೆಪಾಡಿಗಾಗಿ ಮೌಢ್ಯ, ಕಂದಾಚಾರಗಳನ್ನು ಹುಟ್ಟು ಹಾಕುವ ಮೂಲಕ ಜನತೆಯನ್ನು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದರು.
ಜ್ಞಾನಜ್ಯೋತಿ ಮಹಾವಿದ್ಯಾಲಯದ ಅಧ್ಯಕ್ಷ ಬಿ.ಡಿ. ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ಸಾವಿರ ವರ್ಷಗಳ ಭವ್ಯ ಇತಿಹಾಸವಿರುವ ಕನ್ನಡ ಭಾಷೆಗೆ ವಿಶ್ವದಲ್ಲಿ ಅಗ್ರ ಸ್ಥಾನವಿದೆ. ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಭಾಷಾ ಬೆಳವಣಿಗೆಗೆ ಶ್ರಮಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ್, ಚಿಂತಕ ಎಸ್.ವಿ. ಕುಲಕರ್ಣಿ ಮಾತನಾಡಿದರು. ಸಾಹಿತಿ ಆರ್. ವಿಜಯರಾಘವನ್ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಅಭಿನಂದನೆ: ಕಾಂತಾವರ ಕನ್ನಡ ಸಂಘದ 2013ನೇ ಸಾಲಿನ ಪ್ರತಿಷ್ಠಿತ ಮುದ್ದಣ್ಣ ಕಾವ್ಯ ಪ್ರಶಸ್ತಿ ಪುರಸ್ಕೃತ ಆರ್. ವಿಜಯರಾಘವನ್, ನಾಡೋಜ ಬೆಳಗಲ್ಲು ವೀರಣ್ಣ, ವಿಚಾರವಾದಿ ಡಾ. ವೆಂಕಟಯ್ಯ ಅಪ್ಪಗೆರೆ ದಂಪತಿ ಹಾಗೂ ವಿಎಸ್ಕೆ ವಿವಿ ಆಯೋಜಿಸಿದ್ದ ಪ್ರಸಕ್ತ ಸಾಲಿನ ಎಂಎಸ್ಡಬ್ಲ್ಯೂ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಕಾಲೇಜಿನ ಇರ್ಷಾದ್, 2ನೇ ರ್ಯಾಂಕ್ ಗಳಿಸಿದ ರೆಹನಾ ಅವರನ್ನು ಸನ್ಮಾನಿಸಲಾಯಿತು.
ಸಂವಾದದಲ್ಲಿ ಕಾಲೇಜು ಪ್ರಾಚಾರ್ಯ ಹರೀಶ್ ನಾಯ್ಕ್, ಉಪನ್ಯಾಸಕ ಎಸ್.ವಿ. ಕುಲಕರ್ಣಿ, ರೇಣುಕಾ, ಡಿ.ಜಿ. ಮಂಜುನಾಥ್, ಪಿ.ಜಿ. ಸುರೇಶ್, ಪುರುಷೋತ್ತಮ್ ಹಂದ್ಯಾಳ, ಕಪ್ಪಗಲ್ ಚಂದ್ರಶೇಖರ್ ಆಚಾರ್, ನೀಲಮ್ಮ, ಲಕ್ಷ್ಮಣ್, ಶ್ರುತಿ, ರಮೇಶ್, ಎಸ್. ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಸ್ವಾಮಿ ನಿರೂಪಿಸಿದರು. ಉಪನ್ಯಾಸಕ ವೀರೇಶಯ್ಯ ವಂದಿಸಿದರು.