ಸಿಮೆಂಟ್ ಕಾರ್ಖಾನೆ ಕಾರ್ಮಿಕರಿಂದ ಪ್ರತಿಭಟನೆ
ಬಳ್ಳಾರಿ: ಗುತ್ತಿಗೆ ಕಾರ್ಮಿಕರಿಗೆ ಸೆಂಟ್ರಲ್ ಸಿಮೆಂಟ್ ವೇಜ್ ವೇತನ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುಲ್ಬರ್ಗದ ಅಲ್ಟ್ರಾಟೆಕ್ ಸಿಮೆಂಟ್ ಕಾರ್ಖಾನೆ ಕಾರ್ಮಿಕರು ಮಂಗಳವಾರ ಬಳ್ಳಾರಿಯ ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ಗುಲ್ಬರ್ಗ ಜಿಲ್ಲೆ ಸೇಡಂ ತಾಲೂಕಿನಲ್ಲಿರುವ ಬಿರ್ಲಾ ಗ್ರೂಪ್ ಒಡೆತನದ ಅಲ್ಟ್ರಾಟೆಕ್ ಮತ್ತು ವಾಸವದತ್ತಾ ಸಿಮೆಂಟ್ ಕಂಪನಿಗಳಲ್ಲಿ 15ರಿಂದ 20 ವರ್ಷಗಳಿಂದ ನಿರಂತರ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸೆಂಟ್ರಲ್ ಸಿಮೆಂಟ್ ವೇಜ್ ವೇತನ ನೀಡುವಂತೆ ಎರಡು ವರ್ಷಗಳಿಂದ ಹೋರಾಟ ಹಮ್ಮಿಕೊಳ್ಳಲಾಗುತ್ತಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಈ ನಿಟ್ಟಿನಲ್ಲಿ ಬಳ್ಳಾರಿ ನಗರದ ಪ್ರಾದೇಶಿಕ ಕಾರ್ಮಿಕ ಆಯುಕ್ತರ ಕಚೇರಿ ಎದುರೇ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಸೆಂಟ್ರಲ್ ಸಿಮೆಂಟ್ ವೇಜ್ ಬೋರ್ಡ್ ನಿಗದಿಪಡಿಸಿರುವಂತೆ ವೇತನ ಪಾವತಿಸಬೇಕು. 2011ರ ಒಪ್ಪಂದದ ಪ್ರಕಾರ ಹಿಂಬಾಕಿ ವೇತನ ಸಹಿತ ಜಾರಿಗೊಳಿಸಬೇಕು. ಕಾನೂನು ಬಾಹಿರವಾಗಿ ಅಮಾನತು ಮಾಡುವುದನ್ನು, ಕೆಲಸಕ್ಕೆ ತಡೆಯೊಡ್ಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾನಿರತರು, ತಮ್ಮ ಈ ಬೇಡಿಕೆಗಳು ಈಡೇರುವವರೆಗೂ ಹೋರಾಟ ನಡೆಯಲಿದೆ ಎಂದರು.
ಕಾರ್ಮಿಕ ಸಂಘಗಳ ಅಧ್ಯಕ್ಷ ಮರಿಯಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್, ಅಧ್ಯಕ್ಷ ನರಸಪ್ಪ ಯಾದಗಿರಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಉಗಾದಿ, ನೂರಾರು ಕಾರ್ಮಿಕರು ಇದ್ದರು. ಮುನ್ಸಿಪಲ್ ಮೈದಾನದಿಂದ ಮೆರವಣಿಗೆ ಮೂಲಕ ಪ್ರಾದೇಶಿಕ ಆಯುಕ್ತರ ಕಚೇರಿ ಬಳಿ ಸೇರಿದರು.