ಕುರುವತ್ತಿ: ಗೂಳಿ, ಗೌರಿ ದೇಗುಲ ನವೀಕರಣ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಡಿ. 4
ತಾಲೂಕಿನ ಚಿಕ್ಕ ಕುರುವತ್ತಿ ಗ್ರಾಮದಲ್ಲಿ ತುಂಗಭದ್ರಾ ನದಿ ದಡದಲ್ಲಿ ಭಕ್ತರು ರು. 15 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿರುವ ಗೂಳಿ ಬಸವೇಶ್ವರ ದೇವಸ್ಥಾನ ಡಿ. 7ರಂದು ಉದ್ಘಾಟನೆಗೊಳ್ಳಲಿದೆ. ಗೂಳಿ ಮತ್ತು ಗೌರಿ ಮೂರ್ತಿಗಳು ಆಕರ್ಷಣೀಯವಾಗಿವೆ.
ರಾಜಕೀಯ ಪಕ್ಷಗಳ ಪ್ರಮುಖ ನಾಯಕರಾದ ಚಿಕ್ಕಕುರುವತ್ತಿ ಗ್ರಾಮದ ಜಿಪಂ ಮಾಜಿ ಸದಸ್ಯ ಬಸವರಾಜಪ್ಪ ಹಲಗೇರಿ, ತಾಲೂಕು ಜೆಡಿಎಸ್ ಮುಖಂಡ ಸಿ.ಸಿ. ಸಣ್ಣಗೌಡ್ರ ಮುಂತಾದವರೆಲ್ಲ ಸೇರಿ ಈ ದೇವಸ್ಥಾನ ಜೀರ್ಣೋದ್ಧಾರ ಮಾಡಿದ್ದಾರೆ.
ಅಮಾವಾಸ್ಯೆ ವಿಶೇಷ
ಚಿಕ್ಕ ಕುರುವತ್ತಿ ರಾಣಿಬೆನ್ನೂರು ತಾಲೂಕಿನಲ್ಲಿದ್ದರೆ, ನದಿಯ ಆಚೆ ದಡದಲ್ಲಿರುವ ದೊಡ್ಡ ಕುರುವತ್ತಿ ಹೂವಿನಹಡಗಲಿ ತಾಲೂಕಿನಲ್ಲಿದೆ. ದೊಡ್ಡ ಕುರುವತ್ತಿಯ ಬಸವೇಶ್ವರ ದೇವರ ದರ್ಶನಕ್ಕೆ ಅಮಾವಾಸ್ಯೆ, ಹುಣ್ಣಿಮೆ, ಸಂಕ್ರಾಂತಿ ಹಾಗೂ ಜಾತ್ರೆ ಸಮಯದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರುತ್ತಾರೆ. ನದಿ ದಡದಲ್ಲಿರುವ ಗೂಳಿ ಬಸವೇಶ್ವರ ಹಾಗೂ ಗೌರಿ ದೇಗುಲಗಳಿಗೆ ಭೆಟ್ಟಿ ನೀಡುತ್ತಾರೆ.
ಐತಿಹಾಸಿಕ ಹಿನ್ನೆಲೆ
ಚಿಕ್ಕಕುರುವತ್ತಿ ಗ್ರಾಮದ ದೊಡ್ಡ ರೈತರಾಗಿದ್ದ ಪಟೇಲ ಭರಮಗೌಡ್ರ ಮಲ್ಲನಗೌಡ್ರ ಅವರ ಕಣದಲ್ಲಿ ನಿರ್ಮಿಸಲಾಗಿದ್ದ ದನದ ಕೊಟ್ಟಿಗೆ ಪಕ್ಕದಲ್ಲೇ ಇದ್ದ ಮೇವಿನ ಬಣವೆಗೆ ಬೆಂಕಿ ಬಿದ್ದು, ಮೂರು ಹಸುಗಳು ಸುಟ್ಟು ಕರಕಲಾದವು. ಆದರೆ, ಗೌರಿ ಎಂಬ ಹಸು ಸರಪಳಿ ತುಂಡರಿಸಿಕೊಂಡು ಬೆಂಕಿಯ ಉರಿ ತಾಳಲಾರದೆ ಚಡಪಡಿಸುತ್ತ ಓಡಿ, ನದಿಯಲ್ಲಿ ಈಜುತ್ತಾ ಆಚೆ ದಡ ಸೇರಿತ್ತು. ಹಿರೇಕುರುವತ್ತಿ ಗ್ರಾಮದ ಮಲ್ಲಿಕಾರ್ಜುನ ಹಾಗೂ ಬಸವಣ್ಣ ದೇವಸ್ಥಾನಗಳಿಗೆ ಪ್ರದಕ್ಷಿಣೆ ಬಂದು, ಮಲ್ಲಿಕಾರ್ಜುನ ದೇವರ ಮೂರ್ತಿ ಮುಂದೆ ತನ್ನ ಬಳಗದವರಿಗಾದ ನೋವು ನಿವೇದಿಸಿಕೊಂಡು ಕಣ್ಣೀರಿಟ್ಟಿತು. ಐದು ದಿನಗಳ ಕಾಲ ಕಣ್ಣೀರಿನ ಅಭಿಷೇಕ ನಡೆಸಿ, ಚಿಕ್ಕ ಕುರುವತ್ತಿ ಗ್ರಾಮಕ್ಕೆ ಮರಳಿ ಜೀವ ಬಿಟ್ಟಿತೆಂದು ಉಲ್ಲೇಖವಿದೆ.
ಗೌರಿ ಜೀವ ಬಿಡುವ ಮೊದಲೇ ಸುಟ್ಟ ಗಾಯಗಳಿಂದ ಬದುಕಿದ್ದ ಗೂಳಿಯೂ ಪ್ರಾಣ ಬಿಟ್ಟಿತು. ಗ್ರಾಮದ ಮುಖಂಡರು ಗೂಳಿ ಹಾಗೂ ಗೌರಿಯ ದೇಹಗಳನ್ನು ಪ್ರತ್ಯೇಕವಾಗಿ ಅಂತ್ಯಕ್ರಿಯೆ ಮಾಡಿ, ಎರಡು ಗದ್ದುಗೆ ನಿರ್ಮಿಸಿ, ಪೂಜಿಸುತ್ತಿದ್ದಾರೆ.
20 ಅಡಿ ಕಂಬ
1992-93ರ ತುಂಗಭದ್ರೆಯ ಪ್ರವಾಹದ ಹೊಡೆತಕ್ಕೆ ಮನೆ-ಮಠಗಳೊಂದಿಗೆ ಗೌರಿ, ಗೂಳಿ ಗದ್ದುಗೆಗಳೂ ಸಂಪೂರ್ಣ ಹಾಳಾದವು. ಈಗ 20 ಅಡಿ ಎತ್ತರದ ಕಾಂಕ್ರೀಟ್ ಕಂಬಗಳನ್ನು ನಿಲ್ಲಿಸಿ, ಅವುಗಳ ಮೇಲೆ ಗೌರಿ ಹಾಗೂ ಗೂಳಿ ದೇಗುಲಗಳನ್ನು ನಿರ್ಮಿಸಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜಪ್ಪ ಹಲಗೇರಿ, ಜೆಡಿಎಸ್ ಅಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ಮುಖಂಡರಾದ ಕೆ.ಎಂ. ಬಣಕಾರ, ಎನ್.ಎಚ್. ಹೊನ್ನತ್ತೆಪ್ಪನವರ, ಸಿ.ಎನ್. ಕೆಂಪಗೌಡ್ರ, ಆರ್.ಎಸ್. ಚನ್ನಗೌಡ್ರ ತಿಳಿಸಿದರು.
-ಸಾಬ್ಜನ ಇಟಗಿ