ಕೊಟ್ಟೂರು: 12ರಂದು ಅತಿರುದ್ರ ಮಹಾಯಾಗ
ಕೊಟ್ಟೂರು: ಲೋಕ ಕಲ್ಯಾಣಕ್ಕಾಗಿ ಅತಿರುದ್ರ ಮಹಾಯಾಗವನ್ನು ಡಿ. 12ರ ಗುರುವಾರ ಕೊಟ್ಟೂರಿನ ಆಂಜನೇಯ ಬಡಾವಣೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಇದು 2ನೇ ವರ್ಷದ ಅತಿರುದ್ರ ಮಹಾಯಾಗವಾಗಿದ್ದು, ಈ ಸಂಬಂಧ ದೀಕ್ಷಾ ಕಾರ್ಯಕ್ರಮ ಮತ್ತು ಧರ್ಮಸಭೆಗಳು ಅಂದು ನಡೆಯಲಿವೆ ಎಂದು ಮಾನದ ಧರ್ಮ ಆಚಾರ್ಯ ಸಂಸ್ಕೃತಿ ಜ್ಞಾನಾಶ್ರಮ ಟ್ರಸ್ಟ್ ಮುಖ್ಯಸ್ಥ ಸಾರಂಗಮಠದ ರವೀಂದ್ರ ಸ್ವಾಮೀಜಿ ತಿಳಿಸಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿರುದ್ರ ಮಹಾಯಾಗದ ಸಾನ್ನಿಧ್ಯವನ್ನು ಉಜ್ಜಿನಿ ಪೀಠದ ಶ್ರೀ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. ಕೊಟ್ಟೂರು ಹಿರೇಮಠಾಧ್ಯಕ್ಷ ಯೋಗಿರಾಜೇಂದ್ರ ಸ್ವಾಮೀಜಿ, ಚಾನುಕೋಟಿ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಸ್ವಾಮೀಜಿ, ನುಗ್ಗೇಹಳ್ಳಿ ಕೆ. ಅಯ್ಯನಹಳ್ಳಿಯ ಮಹೇಶ್ವರ ಸ್ವಾಮೀಜಿ, ಮಹಲ್ ಮಠದ ಶಂಕರ ಸ್ವಾಮೀಜಿ, ಹಾಲಸ್ವಾಮಿ ಮಠದ ಹಾಲಶಂಕರ ಸ್ವಾಮೀಜಿ ಸೇರಿದಂತೆ ಪುರೋಹಿತರ ನೇತೃತ್ವದಲ್ಲಿ ಯಾಗ ನಡೆಯಲಿದೆ. ಯಾಗ ಕಾರ್ಯಕ್ರಮದ ಅಂಗವಾಗಿ ಡಿ. 7ರಿಂದ 11ರ ವರೆಗೆ ಪ್ರತಿದಿನ ಸಂಜೆ ಇಲ್ಲಿನ ಆಂಜನೇಯ ದೇವಸ್ಥಾನದ ಪಕ್ಕದ ರುದ್ರಯಾಗ ಸ್ಥಳದಲ್ಲಿ ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. 7ರಂದು ಸಿದ್ಧಲಿಂಗೇಶ್ವರ ಲೀಲೆ ಕುರಿತು ದಾವಣಗೆರೆ ಎಸ್. ಗುರುಪಾದಪ್ಪ ಉಪನ್ಯಾಸ ನೀಡಿದರೆ. 8ರಂದು ವಚನಾಮೃತ ಕುರಿತು ಅನುಸೂಯ ಚರಂತಿಮಠ ಮುಳುಗುಂದ ಉಪನ್ಯಾಸ ನೀಡುವರು. 9ರಂದು ಶಿವಪುರಾಣದಲ್ಲಿ ಜಪ, ತಪ, ಧ್ಯಾನ ಕುರಿತು ಕೆ.ಎಚ್.ಎಂ. ವೀರೇಂದ್ರಪ್ರಸಾದ್ ಮಾತನಾಡುವರು. 10ರ ಮಂಗಳವಾರ ವಚನಕಾರರು ಮತ್ತು ವ್ಯಕ್ತಿತ್ವ ವಿಕಸನ ಕುರಿತು ಶಿಕ್ಷಕಿ ಎಸ್.ಎಂ. ನಳಿನಾ ಉಪನ್ಯಾಸ ನೀಡಲಿದ್ದಾರೆ. 11ರ ಬುಧವಾರ ಸಂಜೆ ಗಾಯಕಿ ಐ.ಎಚ್.ಎಂ. ನಂದಿನಿ ಪ್ರಸಾದ್ ಅವರಿಂದ ಹಿಂದೂಸ್ತಾನಿ ಸಂಗೀತ ಗಾಯನ ನಡೆಯಲಿದೆ ಎಂದು ಅವರು ತಿಳಿಸಿದರು. ರುದ್ರಯಾಗದಲ್ಲಿ ಪಾಲ್ಗೊಳ್ಳಲು ಅಪೇಕ್ಷಿಸುವವರು ಮೊ.ಸಂ-9448868555 ಮತ್ತು 8722224023ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.