ಸೆಂಟ್ರಲ್ ಸಿಮೆಂಟ್ ವೇಜ್ ಬೋರ್ಡ್ ವೇತನಕ್ಕೆ ಆಗ್ರಹ
ಬಳ್ಳಾರಿ: ಗುತ್ತಿಗೆ ಕಾರ್ಮಿಕರಿಗೆ ಸೆಂಟ್ರಲ್ ಸಿಮೆಂಟ್ ವೇಜ್ ಬೋರ್ಡ್ ವೇತನ, ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಗುಲ್ಬಾರ್ಗ ಜಿಲ್ಲೆ ಸೇಡಂ ತಾಲೂಕಿನ ಬಿರ್ಲಾ ಒಡೆತನದ ಸಿಮೆಂಟ್ ಕಂಪನಿಯ ಸಾವಿರಾರು ಕಾರ್ಮಿಕರ ಧರಣಿ ಬುಧವಾರ 2ನೇ ದಿನವೂ ಮುಂದುವರೆದಿದೆ.
ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲು ಆಗಮಿಸಿದ್ದ ಗುಲ್ಬರ್ಗದ ವಿವಿಧ ಸಿಮೆಂಟ್ ಕಾರ್ಖಾನೆಗಳ ಕಾರ್ಮಿಕರು, ಆಯುಕ್ತರ ಕಚೇರಿ ಎದುರು ಸ್ಥಳದ ಕೊರತೆಯಿಂದಾಗಿ ಸಮೀಪದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಗುಲ್ಬರ್ಗ ಜಿಲ್ಲೆಯಲ್ಲಿನ ಬಿರ್ಲಾ ಒಡೆತನದ ರಾಜಶ್ರೀ, ವಾಸವದತ್ತಾ ಸಿಮೆಂಟ್ ಕಾರ್ಖಾನೆಗಳಿಗೆ ಸೇರಿದ ಕಾರ್ಮಿಕರು, ಮಹಿಳೆಯರು, ಮಕ್ಕಳು, ವೃದ್ಧರು, ಪುರುಷರು ಸೇರಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. 20-25 ವರ್ಷಗಳಿಂದ ಈ ಕಾರ್ಖಾನೆಗಳಲ್ಲಿ ಕೆಲಸ ಮಾಡಿದ ನಮಗೆ ಈವರೆಗೂ ಯಾವುದೆ ಸೌಲಭ್ಯಗಳನ್ನು ನೀಡದೆ, ಕಾರ್ಮಿಕ ಅಧಿಕಾರಿಗಳು ನಮ್ಮಕಡೆ ಗಮನ ಹರಿಸದೆ, ಶೋಷಣೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಲ್ಬರ್ಗ ಜಿಲ್ಲೆಯ ಸೇಡಂ ತಾಲೂಕಿನಲ್ಲಿರುವ ಬಿರ್ಲಾ ಒಡೆತನದ ವಾಸವದತ್ತಾ, ರಾಜಶ್ರೀ, ಅಲ್ಟ್ರಾಟೆಕ್ ಸಿಮೆಂಟ್ ಕಂಪೆನಿಗಳು, ಒಂದುವರೆ- ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ಸಿಮೆಂಟ್ ಕಂಪನಿಯ ಆಡಳಿತ ಮಂಡಳಿ ಕಾರ್ಮಿಕರಿಗೆ ಅನ್ವಯವಾಗುವ ವೇತನ ನೀಡದೆ 3 ವರ್ಷಗಳಿಂದ ವಂಚಿಸುತ್ತಿವೆ. ಈ ಬಗ್ಗೆ ಹೋರಾಟ ಮಾಡಿದರೂ ಯಾವುದೇ ಪ್ರತಿಕ್ರಿಯೆ ಇಲ್ಲ. ಅಧಿಕಾರಿಗಳು ಗುಲ್ಬರ್ಗಕ್ಕೆ ಬಂದರೂ ನಮ್ಮನ್ನು ಕ್ಯಾರೆ ಎನ್ನದೆ, ಕೇವಲ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತುಕತೆ ಮುಗಿಸಿ ವಾಪಸ್ಸಾಗುತ್ತಿದ್ದಾರೆ. ಹೀಗಾಗಿ ಕೇಂದ್ರ ಕಾರ್ಮಿಕ ಇಲಾಖೆಯ ಪ್ರಾದೇಶಿಕ ಆಯುಕ್ತರ ಕಚೇರಿ ಬಳ್ಳಾರಿಯಲ್ಲಿರುವುದರಿಂದ ಬೇಡಿಕೆ ಈಡೇರುವವರೆಗೂ ನಾವಿಲ್ಲಿಂದ ಮರಳುವುದಿಲ್ಲ ಎಂದು ಎಚ್ಚರಿಸಿದರು.
ಗುಲ್ಬರ್ಗ ಜಿಲ್ಲೆಯ ವಿವಿಧ ಊರುಗಳಿಂದ ಆಗಮಿಸಿರುವ ಕಾರ್ಮಿಕರು, ಮಧ್ಯಾಹ್ನದ ಊಟಕ್ಕೆ ಸ್ಥಳದಲ್ಲೇ ಅಡುಗೆ ಮಾಡಿಕೊಂಡರು. ಇನ್ನು ಕೆಲವರು ಊರುಗಳಿಂದ ತಂದಿದ್ದ ಬುತ್ತಿ ಊಟ ಮಾಡಿದರು.