ವೇತನ ಕಡಿತ: ಉಪನ್ಯಾಸಕರ ಸಂಘ ಖಂಡನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 5
ಸೆಮಿಸ್ಟರ್ ಪರೀಕ್ಷೆಗಳಿಗೆ ನಿಯುಕ್ತಿಗೊಳಿಸಿದರೂ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ 12 ಉಪನ್ಯಾಸಕರ ವಿರುದ್ಧ ವಿಶ್ವವಿದ್ಯಾಲಯ ಕುಲಪತಿ ಡಾ. ಮಂಜಪ್ಪ ಹೊಸಮನೆ ನೀಡಿರುವ ಹೇಳಿಕೆಯನ್ನು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವ್ಯಾಪ್ತಿಯ ಅಧ್ಯಾಪಕರ ಸಂಘ ಖಂಡಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘ, ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಪ್ರಸ್ತುತ ನಡೆದಿರುವ ಸೆಮಿಸ್ಟರ್ ಪರೀಕ್ಷೆಗಳಿಗೆ ನಿಯುಕ್ತಿಗೊಳಿಸಿದರೂ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸದ 12 ಉಪನ್ಯಾಸಕರು ಕರ್ತವ್ಯಲೋಪ ಎಸಗಿದ್ದು, ಅವರ ಒಂದು ತಿಂಗಳ ಸಂಬಳವನ್ನು ತಡೆ ಹಿಡಿಯುವಂತೆ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದೆ.
ಸಮಂಜಸವಲ್ಲ: ಕುಲಪತಿಗಳು ಪರೀಕ್ಷೆಗೆ ಹಾಜರಾಗದ ಉಪನ್ಯಾಸಕರಿಂದ ವಿವರಣೆ ಪಡೆಯಬೇಕಿತ್ತು, ಅಲ್ಲದೆ ಸಂಬಂಧಿಸಿದ ಕಾಲೇಜುಗಳ ಪ್ರಾಚಾರ್ಯರಿಂದ ಯಾವ ಕಾರಣಕ್ಕಾಗಿ ನಿಯುಕ್ತಿಗೊಳಿಸಿದ ಉಪನ್ಯಾಸಕರು ಪರೀಕ್ಷಾ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂಬುದರ ಬಗ್ಗೆ ಸಮಗ್ರ ವರದಿ ಪಡೆದು, ತದನಂತರ ಕರ್ತವ್ಯ ಲೋಪ ಎಸಗಿರುವುದು ಸಾಬೀತಾದಲ್ಲಿ ವಿವಿಯ ಪರೀಕ್ಷಾ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದ ಉಪನ್ಯಾಸಕರ ಮೇಲೆ ಕ್ರಮ ಜರುಗಿಸುವುದು ಸಮಂಜಸವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಮೌಲ್ಯಮಾಪನ ಬಹಿಷ್ಕಾರ: ಆದರೆ ಈ ಮೇಲಿನ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಏಕಪಕ್ಷೀಯವಾಗಿ 12 ಉಪನ್ಯಾಸಕರ ವೇತನವನ್ನು ತಡೆಹಿಡಿಯುವಂತೆ ಉನ್ನತ ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿರುವ ಕ್ರಮವನ್ನು ಸಂಘ ಖಂಡಿಸುತ್ತದೆ.
ವಿಶ್ವವಿದ್ಯಾಲಯದ ಕುಲಪತಿ ಡಾ. ಮಂಜಪ್ಪ ಹೊಸಮನೆಯವರು ಸರ್ವಾಧಿಕಾರಿ ಧೋರಣೆ ಕೈಬಿಡದೆ ಹೋದ ಪಕ್ಷದಲ್ಲಿ ಮತ್ತು ಶಿಸ್ತು ಕ್ರಮದ ಶಿಫಾರಸಿಗೆ ಒಳಗಾದ ಉಪನ್ಯಾಸಕರಲ್ಲಿ ಕ್ಷಮೆಯಾಚಿಸದೆ ಇದ್ದಲ್ಲಿ ಡಿ. 9ರಿಂದ ಆರಂಭಗೊಳ್ಳಲಿರುವ ವಿವಿಯ ಪರೀಕ್ಷಾ ಮೌಲ್ಯಮಾಪನ ಕಾರ್ಯವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡಿದೆ.