ವಿಜ್ಞಾನ ವಿಷಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಬೆಳೆಸಿ
ಹಗರಿಬೊಮ್ಮನಹಳ್ಳಿ: ದೇಶವು ವೈಜ್ಞಾನಿಕವಾಗಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದ್ದರೂ ಇತ್ತ ವಿಜ್ಞಾನ ವಿಷಯಗಳ ಕಲಿಕೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಕಡಿಮೆಯಾಗುತ್ತಿರುವುದಕ್ಕೆ ಹಗರಿಬೊಮ್ಮನಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ರಾಮನಗೌಡ ವಿಷಾದಿಸಿದ್ದಾರೆ. ಹಗರಿಬೊಮ್ಮನಹಳ್ಳಿ ಪಟ್ಟಣ ರಾಮನಗರದ ಗಂಗಾವತಿ ಭೀಮಪ್ಪನವರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ರಾಜ್ಯ ಶಿಕ್ಷಣ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಉಪಪ್ರಾಚಾರ್ಯ ಎಚ್. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಡಯಟ್ನ ಹಿರಿಯ ಉಪನ್ಯಾಸಕ ಎಂ. ಶಂಕ್ರಪ್ಪ, ಮಂಜುನಾಥ ಗೋಪಿ, ಕೊಟ್ರದೇವರು, ಜಿ. ಪ್ರಭುಗೌಡ, ಪಿ. ಸಿದ್ದನಗೌಡ ಭಾಗವಹಿಸಿದ್ದರು. ಎಲ್.ಎಂ. ಶಿವಯೋಗಿ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ಸಿದ್ದೇಶ್ ನಿರೂಪಿಸಿದರು.
ಹಣಕಾಸು ಸಂಸ್ಥೆಯಿಂದ ಸಾಲ
ಬಳ್ಳಾರಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಕೈಗಾರಿಕಾ ಉದ್ಯಮಗಳ ಅಭಿವೃದ್ಧಿಗಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ಶೇ. 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲು ಉದ್ದೇಶಿಸಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ರಾಮಕೃಷ್ಣ ತಿಳಿಸಿದ್ದಾರೆ. ಮಾಹಿತಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಶಾಖಾ ಕಚೇರಿ, ನಂ. 86/2, ಹೊಸಪೇಟೆ ರಸ್ತೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಚೇರಿ ಬಳಿ, ಬಳ್ಳಾರಿ ಕಚೇರಿ ಅಥವಾ ದೂರವಾಣಿ ಸಂಖ್ಯೆ 08392-242106, 242719ಗೆ ಸಂಪರ್ಕಿಸಬಹುದಾಗಿದೆ.
ಜೂಜು: 3 ಬಂಧನ
ಬಳ್ಳಾರಿ: ಮಟ್ಕಾ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮೂವರನ್ನು ಬಂಧಿಸಿ, ಅವರಿಂದ ರು. 5,740ಗಳನ್ನು ವಶಪಡಿಸಿಕೊಂಡಿರುವ ಘಟನೆ ಗುರುವಾರ ಬೈಲೂರಿನಲ್ಲಿ ನಡೆದಿದೆ. ಕುರುಗೋಡು ಸಮೀಪದ ಬೈಲೂರಿನಲ್ಲಿ ಮಟ್ಕಾ ಜೂಜಾಟ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಕುರುಗೋಡು ಪಿಎಸ್ಐ ಸೋಮಶೇಖರ್ ಹಾಗೂ ಸಿಬ್ಬಂದಿ ದಾಳಿ ಮಾಡಿದರು. ಪುರುಷೋತ್ತಮ, ಚಿದಾನಂದಪ್ಪ, ರಮೇಶ್ ಅವರನ್ನು ಬಂಧಿಸಿದ್ದಾರೆ. ಈ ಕುರಿತಾಗಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ: 16 ಜನ ಅಂದರ್
ಬಳ್ಳಾರಿ: ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ, 16 ಆರೋಪಿಗಳನ್ನು ಬಂಧಿಸಿ, ಅವರಿಂದ ರು. 41,200ಗಳನ್ನು ವಶಪಡಿಸಿಕೊಂಡಿರುವ ಘಟನೆ ಕುರುಗೋಡು ಪಟ್ಟದಲ್ಲಿ ನಡೆದಿದೆ. ಇಸ್ಪೀಟ್ ಜೂಜಾಟದ ಕುರಿತು ಖಚಿತ ಮಾಹಿತಿ ಪಡೆದ ಪಿಎಸ್ಐ ಸೋಮಶೇಖರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ, ಹನುಮಂತ ರೆಡ್ಡಿ ಸೇರಿದಂತೆ 16 ಜನರನ್ನು ಬಂಧಿಸಿದ್ದಾರೆ. ಈ ಕುರಿತಾಗಿ ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಲಾರದಲ್ಲಿ ನಾಳೆ ಭಂಡಾರ ಸೃಷ್ಟಿ
ಹೂವಿನಹಡಗಲಿ: ತಾಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಡಿ. 8ರಂದು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಮತ್ತು ಭಂಡಾರ ಸೃಷ್ಟಿ ಕಾರ್ಯಕ್ರಮ ಜರುಗಲಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ ತಿಳಿಸಿದ್ದಾರೆ. 9ರಂದು ಕುರುವತ್ತಿ ಸುಕ್ಷೇತ್ರದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಜರುಗಲಿದ್ದು, ಭಕ್ತಾದಿಗಳು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೈಕ್ ಡಿಕ್ಕಿ: ಪಾದಚಾರಿ ಸಾವು
ಬಳ್ಳಾರಿ: ಬೈಕ್ ಡಿಕ್ಕಿ ಹೊಡೆದ ಪಾದಚಾರಿ ಮೃತಪಟ್ಟಿರುವ ಘಟನೆ ಸಿರುಗುಪ್ಪ ತಾಲೂಕಿನ ಚಿಕ್ಕಬಳ್ಳಾರಿ ಸಮೀಪದಲ್ಲಿ ನಡೆದಿದೆ. ಮೃತನು ಚಿಕ್ಕಬಳ್ಳಾರಿಯ ನವಗ್ರಾದ ಈರಮ್ಮ ಎನ್ನುವವನ ಮಗನಾಗಿದ್ದಾನೆ. ಈರಮ್ಮ ತನ್ನ ಮಗನೊಂದಿಗೆ ಜಮೀನಿಗೆ ಹೋಗಿ ಗ್ರಾಮಕ್ಕೆ ವಾಪಸ್ ಹೋಗುತ್ತಿರುವಾಗ ಹಿಂದುಗಡೆಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಆತನನ್ನು ಚಿಕಿತ್ಸೆಗೆಂದು ಸಿರುಗುಪ್ಪಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದಾನೆ. ಈ ಕುರಿತಾಗಿ ಹಚ್ಚೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪದಾಧಿಕಾರಿಗಳ ನೇಮಕ
ಬಳ್ಳಾರಿ: ಬಿಜೆಪಿ ಜಿಲ್ಲಾ ಸ್ಲಂ ಮೋರ್ಚಾಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ನೇಮಿರಾಜ್ ನಾಯ್ಕ್ ಜಿಲ್ಲಾ ಸ್ಲಂ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಮಹೇಶ್ ಬಣಕಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀನಿವಾಸ್ ಯಾದವ್, ಸುರೇಶ್ ಅಮ್ದಲ್ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಇಂದಿನಿಂದ ಉಸ್ತುವಾರಿ ಸಚಿವರ ಪ್ರವಾಸ
ಬಳ್ಳಾರಿ: ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರು ಡಿ. 7ರಿಂದ 10ರ ವರೆಗೆ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಡಿ. 7ರಂದು ಬೆಳಗ್ಗೆ 10-30 ಗಂಟೆಗೆ ಜಿಲ್ಲೆಯ ಹಡಗಲಿಗೆ ಆಗಮಿಸಿ ಸಾರ್ವಜನಿಕರಿಂದ ಕುಂದು-ಕೊರತೆ ಸ್ವೀಕರಿಸಲಿದ್ದು, ರಾತ್ರಿ ಹಡಗಲಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. 8ರಂದು ಮಧ್ಯಾಹ್ನ 12 ಗಂಟೆಗೆ ಹಡಗಲಿಯಿಂದ ಬಳ್ಳಾರಿಗೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 4ಕ್ಕೆ ಹೊಸಪೇಟೆಗೆ ಹೊರಟು ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. 9ರಂದು ಬೆಳಗ್ಗೆ 11-30 ಗಂಟೆಗೆ ಹೊಸಪೇಟೆಯ ಅಮರಾವತಿ ಪರಿವೀಕ್ಷಣಾ ಮಂದಿರದಲ್ಲಿ ಉನ್ನತ ಶಿಕ್ಷಣ ಹಾಗೂ ಪ್ರವಾಸೋದ್ಯಮ ಸಚಿವರೊಂದಿಗೆ ರಾಜ್ಯ ಮಟ್ಟದ ಹಂಪಿ ಉತ್ಸವ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 5-30ಕ್ಕೆ ಹರಪನಹಳ್ಳಿಗೆ ಹೊರಟು ಅಲ್ಲಿಯೇ ತಂಗಲಿದ್ದಾರೆ. 10ರಂದು ಬೆಳಗ್ಗೆ 11-30ಕ್ಕೆ ಹಡಗಲಿ ತಾಲೂಕು ಲಿಂಗನಾಯ್ಕನಹಳ್ಳಿಗೆ ಆಗಮಿಸಿ ಲಿಂಗನಾಯ್ಕನಹಳ್ಳಿ ಶ್ರೀಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಧ್ಯಾಹ್ನ 1-30ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಬಸಮ್ಮ ತಳವಾರ ನಿಧನ
ಹಾನಗಲ್ಲ: ಬಳ್ಳಾರಿ ಜಿಲ್ಲಾಧಿಕಾರಿಯಾಗಿದ್ದ ಬಿ. ಶಿವಪ್ಪ ಅವರ ಮಾತೋಶ್ರೀ, ತಾಲೂಕಿನ ಬೀಳಿಗಿ ನಿವಾಸಿ ಬಸಮ್ಮ ಬೆಳ್ಳೆಪ್ಪ ತಳವಾರ (80) ಗುರುವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.