ಸ್ವಚ್ಛತಾ ಆಂದೋಲನಕ್ಕೆ ಪಿ. ಸುನೀಲ್ ಕುಮಾರ ಚಾಲನೆ
ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸ್ವಚ್ಛತಾ ಆಂದೋಲನ ಕಾರ್ಯಕ್ರಮಕ್ಕೆ ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ಶುಕ್ರವಾರ ಚಾಲನೆ ನೀಡಿದರು.
ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್ ಮಾತನಾಡಿ, ಹಂಪಿಗೆ ದೇಶ-ವಿದೇಶಗಳಿಂದಲೂ ನಿತ್ಯವೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಹೀಗಾಗಿ, ಸ್ವಚ್ಛತೆ ಕಾಪಾಡಿಕೊಳ್ಳುವ ದೃಷ್ಟಿಯಿಂದ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದ ರಥ ಬೀದಿಯಲ್ಲಿ ಸ್ವಚ್ಛತಾ ಆಂದೋಲನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು.
ಹಂಪಿ ವಿಶ್ವ ಪರಂಪರಾ ಪ್ರದೇಶ ನಿರ್ವಹಣಾ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಕೇಂದ್ರ ಮತ್ತು ರಾಜ್ಯ ಇಲಾಖಾಧಿಕಾರಿಗಳು, ಹಂಪಿ ಗ್ರಾಮ ಪಂಚಾಯಿತಿ, ಕಮಲಾಪುರ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಕಾರ್ಮಿಕರು ಹಂಪಿಯನ್ನು ಸ್ವಚ್ಛವಾಗಿಡಬೇಕು ಎಂದು ಅವರು ಸೂಚಿಸಿದರು.
ತಹಸೀಲ್ದಾರ್ ರಮೇಶ್ ಕೋನರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎಲ್.ಡಿ. ಜೋಷಿ, ಹಂಪಿ ಪ್ರಾಧಿಕಾರಿದಿಂದ ಗುರುರಾಜ್ ದಿಗ್ಗಾವಿ, ಯಮುನಾ ನಾಯ್ಕ, ಪಟ್ಟಣ ಪಂಚಾಯಿತಿ ಅಧಿಕಾರಿ ಉಮೇಶ್ ಹಿರೇಮಠ್, ಪಟ್ಟಣ ಪಂಚಾಯಿತಿ ಅಧಿಕಾರಿಗಳಾದ ಹೇಮತ್ ಕುಮಾರ್, ಹನುಮಂತಪ್ಪ, ಶಿವರಾಜ್ ಕಟ್ಟಿಮನಿ ರಾಜ್ಯ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.