ನೀರು ಹಂಚಿಕೆಗೆ ಆಂಧ್ರ ಕ್ಯಾತೆ
ಮುನಿರಾಬಾದ್: ಹಿಂಗಾರು ಬೆಳೆಗೆ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಯ ನೀರು ಹಂಚಿಕೆ ವಿಷಯದಲ್ಲಿ ಆಂಧ್ರಪ್ರದೇಶ ಕಳೆದ ಬಾರಿಯಂತೆ ಈ ವರ್ಷವೂ ಕಿರಿಕ್ ನೀಡಲು ಪ್ರಾರಂಭಿಸಿದೆ.
ಇದರಿಂದ ತುಂಗಭದ್ರಾ ಬಲದಂಡೆ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆಯ ರೈತರಿಗೆ ಹಿಂಗಾರು ಬೆಳೆಗೆ ನಿಗದಿಯಾದ 4.65 ಟಿಎಂಸಿ ನೀರು ದೊರೆಯುವುದು ಮರೀಚಿಕೆಯಾಗಿದೆ. ಕೆಳಮಟ್ಟದ ಕಾಲುವೆಯ ಕಂಪ್ಲಿ, ಸಿರುಗುಪ್ಪ, ಬಳ್ಳಾರಿ, ಕುರುಗೋಡು ಪ್ರದೇಶದ ರೈತರು ಆತಂಕಗೊಂಡಿದ್ದಾರೆ.
ಶುಕ್ರವಾರ ಸಂಜೆ ರೈತ ಮುಖಂಡರಾದ ಪುರುಷೋತ್ತಮ ಗೌಡರ ಮುಖಂಡತ್ವದಲ್ಲಿ 300ಕ್ಕೂ ಅಧಿಕ ರೈತರು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಗಳ ಕಚೇರಿಗೆ ಆಗಮಿಸಿ ಮೂರು ಗಂಟೆಗೂ ಅಧಿಕ ಕಾಲ ನಡೆಸಿದ ಮಾತುಕತೆ ವಿಫಲವಾಯಿತು.
ನಂತರ 'ಕನ್ನಡಪ್ರಭ'ದೊಂದಿಗೆ ಮಾತನಾಡಿದ ರೈತ ಮುಖಂಡ ಪುರುಷೋತ್ತಮ ಗೌಡ, ಪ್ರಸಕ್ತ ಸಾಲಿನ ಹಿಂಗಾರಿಗೆ ತುಂಗಭದ್ರಾ ಬಲದಂಡೆ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆಯಲ್ಲಿ ಕರ್ನಾಟಕಕ್ಕೆ 4.65 ಟಿಎಂಸಿ ಹಾಗೂ ಆಂಧ್ರಕ್ಕೆ 8.6 ಟಿಎಂಸಿ ನೀರನ್ನು ನಿಗದಿ ಮಾಡಲಾಗಿದೆ. ಎರಡು ರಾಜ್ಯಗಳು 1 ಹಾಗೂ 1.6 ಅನುಪಾತದಲ್ಲಿ ನೀರನ್ನು ಹಂಚಿಕೆ ಮಾಡಿಕೊಳ್ಳಬೇಕು.
ಈ ಕಾಲುವೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ಕಾಲುವೆಯ ತೂಬುಗಳು ಕಾಲುವೆಯಿಂದ ನಾಲ್ಕು ಅಡಿ ಮೇಲೆ ಇದ್ದು, ಆಂಧ್ರ ಹಾಗೂ ಕರ್ನಾಟಕ ರಾಜ್ಯಗಳು ಈ ಕಾಲುವೆಯಲ್ಲಿ ಜಂಟಿಯಾಗಿ ನೀರು ತೆಗೆದುಕೊಂಡರೆ ಮಾತ್ರ ಕರ್ನಾಟಕದ ರೈತರಿಗೆ ನೀರು ಲಭಿಸುತ್ತದೆ.
ಆಂಧ್ರದಿಂದ ತಿಲಾಂಜಲಿ: ಜಲಾಶಯ ನಿರ್ಮಾಣವಾದಾಗಿನಿಂದ ಹಿಂಗಾರು ಬೆಳೆಗೆ ಆಂಧ್ರ ಹಾಗೂ ಕರ್ನಾಟಕಕ್ಕೆ ಈ ಕಾಲುವೆಯಲ್ಲಿ ಜಂಟಿಯಾಗಿ ನೀರನ್ನು ಹರಿಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಆಂಧ್ರ ಕಿರಿಕ್ ಪ್ರಾರಂಭಿಸಿತು. ಕಳೆದ ವರ್ಷ ಆಂಧ್ರ ಹಿಂಗಾರಿಗೆ ತನಗೆ ನೀರಿನ ಅಗತ್ಯವಿಲ್ಲ ಎಂದು ತನ್ನ ಪಾಲಿನ ನೀರನ್ನು ಸ್ಥಗಿತಗೊಳಿಸಿದ ಪರಿಣಾಮ ಎಲ್ಎಲ್ಸಿ ಅಚ್ಚುಕಟ್ಟಿನ ಪ್ರದೇಶದಲ್ಲಿನ ಸುಮಾರು 80,000 ಎಕರೆ ಪ್ರದೇಶದಲ್ಲಿ ಬೆಳೆದ ರು. 200 ಕೋಟಿ ಬತ್ತ ನಾಶವಾಯಿತು.
ಇದು ಅಂತರ ರಾಜ್ಯ ಯೋಜನೆಯಾಗಿರುವುದರಿಂದ ತುಂಗಭದ್ರಾ ಮಂಡಳಿಯು ರೈತರ ಹಿತವನ್ನು ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪುರುಷೋತ್ತಮ ಗೌಡರು ಆರೋಪಿಸಿದರು.
ಆಂಧ್ರಕ್ಕೆ ಪತ್ರ: ಮಂಡಳಿ ಅಧಿಕಾರಿಗಳು ತಮ್ಮ ಹಿಂಗಾರು ಪಾಲಿನ ನೀರನ್ನು ಮಾರ್ಚ್ 31ರ ಒಳಗೆ ಬಳಸಿಕೊಳ್ಳಬೇಕೆಂದು ಆಂಧ್ರಕ್ಕೆ ಪತ್ರವನ್ನು ಬರೆದಿರುತ್ತಾರೆ. ಆದರೆ, ಇದುವರೆಗೂ ಆಂಧ್ರದಿಂದ ಯಾವುದೇ ಉತ್ತರ ಲಭ್ಯವಾಗಿಲ್ಲ. ಒಂದು ವೇಳೆ ಡಿಸೆಂಬರ್ 15 ರೊಳಗೆ ಆಂಧ್ರ ಉತ್ತರ ನೀಡದಿದ್ದರೆ ಕರ್ನಾಟಕದ ರೈತರು ತಮ್ಮ ಹಿಂಗಾರು ಬೆಳೆಯನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದೊದಗಿದೆ.