ಪ್ರತಿಭಾ ಪಲಾಯನ ತಡೆಯದಿದ್ದರೆ ನಷ್ಟ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 7
ಪ್ರತಿಭಾ ಪಲಾಯನ ತಡೆಯದಿರುವುದರಿಂದ ಬಹುದೊಡ್ಡ ನಷ್ಟ ಅನುಭವಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಮಾಡುವ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ವಿವಿಧ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಲು ಮುಂದಾಗಿರುವುದು ನೆಮ್ಮದಿ ಸಂಗತಿ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಸುರೇಶ್ ಹೇಳಿದರು.
ಪಟ್ಟಣದ ಇಂದು ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದೊಂದಿಗೆ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆಯನ್ನು ಪ್ರಾಥಮಿಕ ಹಂತದಿಂದಲೇ ಹೊರ ತರುವ ಕೆಲಸವಾಗಬೇಕಿದೆ. ಈ ಕಾರ್ಯಕ್ರಮವನ್ನು ಕೇವಲ ಕಾಟಾಚಾರಕ್ಕೆ ನಡೆಸಬಾರದು. ಸರ್ಕಾರ ಮತ್ತು ಜನತೆ ಇಂತಹ ಕಾರ್ಯಕ್ರಮಗಳು ನಿರಂತರ ಕೈಗೊಳ್ಳಬೇಕು ಎಂದರು.
ಜಿಪಂ ಸದಸ್ಯ ಪಿ. ಚನ್ನಬಸವನಗೌಡ ಮಾತನಾಡಿ, ಶಿಕ್ಷಣವೆಂದರೆ ಬರೀ ಪಠ್ಯವಿಷಯಗಳ ಕಲಿಕೆಯ ಕ್ರಮವಲ್ಲ. ಪಠ್ಯೇತರ ವಿಷಯಗಳಲ್ಲೂ ಆಸಕ್ತಿಯನ್ನು ಹುಟ್ಟುಹಾಕುವುದಾಗಿದೆ. ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳು ಮಕ್ಕಳಲ್ಲಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಜ್ಞೆಯನ್ನು ಹೊರಚೆಲ್ಲುವುದಕ್ಕೆ ಸಹಕಾರಿಯಾಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ಯಾವೊಬ್ಬ ವಿದ್ಯಾರ್ಥಿಯೂ ವಂಚಿತರಾಗಬಾರದು ಎಂದರು.
ಜಿಪಂ ಸದಸ್ಯೆ ಶಾರದಾ ಪ್ರಸಾದ್ ಮಾತನಾಡಿ, ಬದುಕಿಗೆ ಹತ್ತಿರವಾದ ಶಿಕ್ಷಣ ಅತಿ ಅವಶ್ಯ. ಉತ್ತಮ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಆಯೋಜಿಸಿದ್ದ ಇಂದು ಸಮೂಹ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಸಂತೋಷ್ ಕುಮಾರ್ ಅವರನ್ನು ಶಿಕ್ಷಣ ಇಲಾಖೆ ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು.
ಪಪಂ ಅಧ್ಯಕ್ಷೆ ಅನಸೂಯಾ ಸೆರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಮೀನಾಕ್ಷಮ್ಮ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ಚಿದಾನಂದ, ಪಪಂ ಉಪಾಧ್ಯಕ್ಷ ಗುರುಶಾಂತಪ್ಪ, ಸದಸ್ಯರಾದ ಚಿರಿಬಿ ಕೊಟ್ರೇಶ್, ಸುಮಾ ಮಂಜುನಾಥಗೌಡ, ಬರ ನಾಗಪ್ಪ, ಎಂ.ಎಂ. ಚನ್ನಯ್ಯ, ಪಿ. ಸುಧಾಕರ್ ಪಾಟೀಲ್, ಜನಾರ್ದನ ಶೆಟ್ಟಿ ಜಿನಾಬಿ, ಕೊತ್ಲಪ್ಪ, ಮೈಲೇಶ್ ಬೇವೂರು, ಬಸಯ್ಯ, ಬಿ. ಪಂಪಾಪತಿ, ಶ್ರೀಧರ, ಪಿಎಸ್ಐ ಗುರುರಾಜ್ ಮೈಲಾರ, ಎಚ್.ಎನ್. ವೀರಭದ್ರಪ್ಪ ಪಾಲ್ಗೊಂಡಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪಿ. ನಾಗೇಶ್ ಸ್ವಾಗತಿಸಿದರು. ಶಿಕ್ಷಕರಾದ ರವಿ, ಶಿವರಾಜ್ ನಿರೂಪಿಸಿದರು.