ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ
ಹೂವಿನಹಡಗಲಿ: ಕೃಷಿ ಉತ್ಪನ್ನ್ನಗಳನ್ನು ಮಾರಾಟ ಮಾಡಲು ಬರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಎಪಿಎಂಸಿ ಅಧಿಕಾರಿಗಳು ಮತ್ತು ಹಮಾಲರಿಗೆ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ತಾಕೀತು ಮಾಡಿದರು.
ಎಪಿಎಂಸಿ ಆವರಣದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಷ್ಟಪಟ್ಟು ಬೆಳೆದ ಬೆಳೆಯನ್ನು ಮಾರಾಟಕ್ಕೆ ತರುವ ರೈತರಿಗೆ ತೂಕದಲ್ಲಿ ಯಾವುದೆ ಮೋಸವಾಗದಂತೆ ನೋಡಿಕೊಳ್ಳಬೇಕು. ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆ ಪರಿಷ್ಕರಣೆ ಮಾಡಲು ಚಿಂತನೆ ನಡೆಸಿದೆ. ಪ್ರತಿ ರೈತರಿಂದ 25 ಕ್ವಿಂಟಲ್ ಮೆಕ್ಕೆಜೋಳ ಮಾತ್ರ ಖರೀದಿಸುವ ನಿರ್ಬಂಧ ಸಡಿಲಿಸಲಾಗಿದೆ. ರೈತರು ಬೆಳೆದ ಸಂಪೂರ್ಣ ಮೆಕ್ಕೆಜೋಳ ಫಸಲನ್ನು ಸರ್ಕಾರಿ ಖರೀದಿ ಕೇಂದ್ರಗಳಲ್ಲಿ ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೊಹಿದ್ದೀನ್ ಮಾತನಾಡಿ, ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸರ್ಕಾರ ಖರೀದಿ ಕೇಂದ್ರ ಆರಂಭಿಸಿದೆ. ತಾಲೂಕಿನ ರೈತರು ಈ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಆಹಾರ ನಿಗಮದ ಉಪ ನಿರ್ದೇಶಕ ಮಂಟೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಪಿ. ವಿಜಯಕುಮಾರ್, ಉಪಾಧ್ಯಕ್ಷ ಶಿವಮೂರ್ತಿ, ರಾಜ್ಯ ಕಾರ್ಮಿಕ ಮಂಡಳಿ ನಿರ್ದೇಶಕ ಎಂ. ಪರಮೇಶ್ವರಪ್ಪ, ಅರವಳ್ಳಿ ವೀರಣ್ಣ, ಸಿ. ಚಾಂದ್ಸಾಬ್, ಕೆ. ಮುದುಕಪ್ಪ, ಜ್ಯೋತಿ ಮಲ್ಲಣ್ಣ, ಕೆಎಸ್ಎಫ್ಸಿ ಸಹಾಯಕ ವ್ಯವಸ್ಥಾಪಕ ವಿ.ಆರ್. ಕುಮಾರ್ ಇದ್ದರು.
ಸಿಎಂ ಸಲಹೆಯಂತೆ ಕಾರ್ಯ: ಸಚಿವ ಪಿಟಿಪಿ
ಹೂವಿನಹಡಗಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆಯಂತೆ ನನ್ನ ಖಾತೆಯನ್ನು ನಿಭಾಯಿಸುತ್ತಿವೆ ಎಂದು ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಎಪಿಎಂಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟದ 10 ಸಚಿವರ ಕಾರ್ಯವೈಖರಿಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ದಕ್ಷ ಆಡಳಿತಗಾರ, ಜವಾಬ್ದಾರಿಯುತ ಮುಖ್ಯಮಂತ್ರಿಯ ಮಾರ್ಗದರ್ಶನದಂತೆ ಕಾರ್ಮಿಕ ಇಲಾಖೆಗೆ ಕಾಯಕಲ್ಪ ನೀಡಲು ಪ್ರಯತ್ನ್ನಿಸುತ್ತಿದ್ದೇನೆ ಎಂದರು.
ಸಿಂಗಟಾಲೂರು ಏತನೀರಾವರಿ ಯೋಜನೆಯ ಬಲದಂಡೆ ಭಾಗಕ್ಕೆ ತಜ್ಞರ ಅಭಿಪ್ರಾಯ ಪಡೆದು ಮೈಕ್ರೋ ಇರಿಗೇಷನ್ ಮೂಲಕ ಹೆಚ್ಚು ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು. ಈ ಕುರಿತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚಿಸಿದ್ದು, ಈ ಯೋಜನೆಯಿಂದ ಬಲದಂಡೆ ಭಾಗಕ್ಕೆ ಯಾವುದೆ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಕುಟುಂಬಕ್ಕೆ ಪರಿಹಾರ: ಬಳ್ಳಾರಿ ನಗರ ಪ್ರದೇಶದಲ್ಲಿ 3 ವರ್ಷಗಳ ಹಿಂದೆ ನಡೆದ ಅತ್ಯಾಚಾರ ತೀರ್ಪು ಪ್ರಕಟವಾದ ಬೆನ್ನ್ನಲ್ಲೇ ಆರೋಪಿಯ ಕುಟುಂಬದವರು ಬಾಲಕಿಯ ಪೋಷಕರಿಗೆ ಕಿರುಕುಳ ನೀಡಿ, ಮನೆ ಸುಟ್ಟು ಹಾಕಿರುವ ಘಟನೆ ಕುರಿತು ಗೃಹ ಸಚಿವರೊಂದಿಗೆ ಚರ್ಚಿಸಿದ್ದೇನೆ. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಡಿ. 12ರಂದು ಬಾಲಕಿ ಮನೆಗೆ ಭೇಟಿ ನೀಡಿ, ಪರಿಹಾರದ ಚೆಕ್ ವಿತರಿಸುತ್ತೇನೆ. ದೌರ್ಜನ್ಯಕ್ಕೊಳಗಾಗಿರುವ ಕುಟುಂಬಕ್ಕೆ ಮನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.
ಕೌಶಾಲ್ಯಾಭಿವೃದ್ಧಿ ಘಟಕ ಆರಂಭ: ಇಲ್ಲಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಜರ್ಮನ್ ನೆರವಿನಡಿ ಬಹು ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆ ಪ್ರಾರಂಭಗೊಳಿಸಲು ರು. 50 ಕೋಟಿ ಯೋಜನೆ ಸಿದ್ಧಗೊಂಡಿದೆ. ಕಸೂತಿ ಮತ್ತು ಸಿದ್ಧ ಉಡುಪು ತಯಾರಿಕಾ ಘಟಕಕ್ಕೆ ರು. 3 ಕೋಟಿ ಮಂಜೂರಾಗಿದೆ ಎಂದರು.
ಹೂವಿನಹಡಗಲಿಯಲ್ಲಿ ಹೊಸದಾಗಿ ಕಾರ್ಮಿಕ ನಿರೀಕ್ಷಕರ ಕಚೇರಿ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಕಾರ್ಮಿಕರ ಸಮಸ್ಯೆ ಮತ್ತು ಸರ್ಕಾರಿ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಸುಲಭವಾಗಲಿದೆ ಎಂದು ಹೇಳಿದರು.