ಎರಡು ಮೃತ ದೇಹ ಪತ್ತೆ
ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ ಸಮೀಪದ ಎಚ್‌ಎಲ್ ಕಾಲುವೆಯಲ್ಲಿ ಎರಡು ಮೃತದೇಹಗಳು ಸೋಮವಾರ ಬೆಳಗ್ಗೆ ಪತ್ತೆಯಾಗಿವೆ. ಮೃತರಲ್ಲಿ ಓರ್ವ ಹೊಸಪೇಟೆಯ ಕಾರ್ತಿಕ್ (22), ಅಂದಾಜು 20 ವರ್ಷದ ಯುವತಿ ಗುರುತು ಪತ್ತೆಯಾಗಿಲ್ಲ. ಸೋಮವಾರ ಬೆಳಗ್ಗೆ ತೋರಣಗಲ್ ಸಮೀಪದಲ್ಲಿ ಎರಡು ಮೃತ ದೇಹಗಳು ಎಚ್‌ಎಲ್ ಕಾಲುವೆಯಲ್ಲಿ ಇರುವ ಬಗ್ಗೆ ತೋರಣಗಲ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪಿಎಸ್‌ಐ ಬಾಲಚಂದ್ರ ನಾಯಕ್ ಭೇಟಿ ನೀಡಿ ಪರಿಶೀಲಿಸಿ, ಮೃತದೇಹಗಳನ್ನು ಹೊರಕ್ಕೆ ತೆಗೆದಿದ್ದಾರೆ. ಮೃತ ಯುವಕನ ಬಟ್ಟೆ ಮೇಲೆ ಅಶೋಕ್ ಲೈಲ್ಯಾಂಡ್ ಎಂಬ ಅಕ್ಷರ ಇರುವುದು ನೋಡಿ, ಹೊಸಪೇಟೆ ಪೊಲೀಸರಿಗೆ ಮಾಹಿತಿ ನೀಡಿದಾಗ, ಮೃತನು ಹೊಸಪೇಟೆಯ ಅಶೋಕ್ ಲೈಲ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ತಿಳಿದುಬಂದಿದೆ. ಶವ ಪರೀಕ್ಷೆ ನಡೆಸಿ ಮೃತದೇಹವನ್ನು ಆತನ ಪೋಷಕರಿಗೆ ನೀಡಲಾಗಿದೆ. ಅಂದಾಜು ನಾಲ್ಕೈದು ದಿನಗಳ ಹಿಂದೆಯೇ ನೀರಿನಲ್ಲಿ ಬಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು 20 ವರ್ಷದ ಹುಡುಗಿಯ ಮೃತ ದೇಹ ತೀರಾ ಕೊಳೆತಿತ್ತು, ಮೃತದೇಹವನ್ನು ಸಾಗಿಸಲು ಕಷ್ಟವಾಗಿದ್ದರಿಂದ ಪೊಲೀಸರು ವೈದ್ಯರೊಂದಿಗೆ ಶವಪರೀಕ್ಷೆ ಮಾಡಿ, ದಹನ ಮಾಡಿದ್ದಾರೆ. ಯುವತಿ ಲಂಗ, ಜಾಕೆಟ್ ಧರಿಸಿದ್ದಳು. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
--
ಹಣದ ಚೀಲ ದೋಚಿ ಪರಾರಿ
ಹೊಸಪೇಟೆ: ಕಿರಾಣಿ ಅಂಗಡಿ ವ್ಯಾಪಾರಿಯೋರ್ವ ವ್ಯಾಪಾರ ಮುಗಿಸಿಕೊಂಡು ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕೈ ಚೀಲದಲ್ಲಿದ್ದ ರು. 2.5 ಲಕ್ಷ ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಜೋದಾರಾಂ ಅವರು ನಗರದ ಮದಕರಿ ನಾಯಕ ವೃತ್ತ ಸಮೀಪದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು. ವ್ಯಾಪಾರ ಮಾಡಿಕೊಂಡು ರು. 2.5 ಲಕ್ಷ ಹಣವನ್ನು ಕೈ ಚೀಲದಲ್ಲಿ ತೆಗೆದುಕೊಂಡು ಹೋಗುವಾಗ ಅನಾಮದೇಯ ವ್ಯಕ್ತಿಯೋರ್ವ, ಈಗ ಅಕ್ಕಿಯ ಬೆಲೆ ಎಷ್ಟಿದೆ ಎಂದು ಅಂಗಡಿಯ ಮಾಲೀಕನನ್ನು ಮಾತಿಗೆ ಎಳೆದು ನಂತರ ಹಣದ ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.