ಕೊಂಡಯ್ಯ ವಿರುದ್ಧ ಆರೋಪ: ಧರಣಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 9
ನೇಕಾರ ಸಮಾಜದ ಮುಖಂಡ, ಮಾಜಿ ಸಂಸದ ಕೆ.ಸಿ. ಕೊಂಡಯ್ಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತ ಅವರ ತೇಜೋವಧೆ ಮಾಡುತ್ತಿರುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಂಜನೇಯಲು ಮತ್ತು ಶಾಸಕ ಅನಿಲ್ ಲಾಡ್ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿತು.
ಮಿಥ್ಯ ಆರೋಪ: ಒಕ್ಕೂಟದ ಅಧ್ಯಕ್ಷ ಸಿ. ದೇವಾನಂದ ಮಾತನಾಡಿ, ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕಾಗಿ 5070 ಚದರ ಅಡಿ ಖಾಲಿ ನಿವೇಶನ ಜಿಲ್ಲಾಡಳಿತದಿಂದ 30 ವರ್ಷಗಳ ಅವಧಿಗೆ ಮಂಜೂರಾಗಿದೆ. ಜಿಲ್ಲಾಡಳಿತ ಪಕ್ಷಕ್ಕೆ ನೀಡಲಾಗದು ಎಂದು ಹೇಳಿದ ಹಿನ್ನೆಲೆಯಲ್ಲಿ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಮೂಲಕ ನಿವೇಶನ ಪಡೆಯಲಾಗಿದೆ. ಆದರೆ, ಈ ನಿವೇಶನವನ್ನು ಕೊಂಡಯ್ಯ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಂಜನೇಯಲು, ಅನಿಲ್ ಲಾಡ್ ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.
ಸಮುದಾಯಕ್ಕೆ ನೋವು: 30 ವರ್ಷಗಳ ರಾಜಕೀಯ ಜೀವನದಲ್ಲಿರುವ ಕೊಂಡಯ್ಯ ಅವರು, ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ ಸದಸ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಆದರೆ ಎಂದೂ ಇಂತಹ ಆರೋಪಗಳನ್ನು ಎದುರಿಸದ ಅವರನ್ನು ತೇಜೋವಧೆ ಮಾಡಲು ಆಂಜನೇಯಲು, ಅನಿಲ್ ಲಾಡ್ ಷಡ್ಯಂತ್ರ ರೂಪಿಸುತ್ತಿದ್ದಾರೆ. ರಾಜ್ಯದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ನೇಕಾರ ಸಮುದಾಯದ 70 ಲಕ್ಷ ಜನರಿದ್ದಾರೆ. ಕೊಂಡಯ್ಯ ಅವರಿಗೆ ಅಪಮಾನ ಮಾಡುವ ಮೂಲಕ ಸಮುದಾಯದ ಜನತೆಯ ಭಾವನೆಗೆ ನೋವುಂಟು ಮಾಡಿದೆ ಎಂದು ತಿಳಿಸಿದರು.
ಟ್ರಸ್ಟ್ ವತಿಯಿಂದ ಯುವಕರಿಗೆ ಉಚಿತ ತರಬೇತಿಗಳು, ಯುವಕರ ಏಳಿಗೆಗೆ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆದರೆ ಈ ರೀತಿ ಕೆ.ಸಿ. ಕೊಂಡಯ್ಯ ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದವರ ಮೇಲೆ ಕೂಡಲೇ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬಳಿಕ ಜಿಲ್ಲಾಡಳಿತಕ್ಕೆ ಒಕ್ಕೂಟದ ಕಾರ್ಯಕರ್ತರು ಮನವಿಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾಲಿಕೆ ಸದಸ್ಯ ದೇಸಾಯಿ ಸುಧಾಕರ್, ಸಮುದಾಯದ ಶೀಲಾ ಚಿನ್ನಬ್ರಹ್ಮಯ್ಯ, ತುಕ್ಕ ರಾಜೇಶ್, ಅವ್ವಾರ್ ಮಂಜುನಾಥ್, ದೊಡ್ಡಗಟ್ಟಿ ಶಿವಪ್ಪ, ಶ್ಯಾವಿ ಬಸವರಾಜ್, ಗಟ್ಟುರಾಮು, ದೊಡ್ಡಗಟ್ಟಿ ನೀಲಕಂಠಪ್ಪ, ಡಿ.ಸಿ. ಬಸಣ್ಣ, ಗೋಪಾಲ್, ಶ್ರೀನಿವಾಸ, ಕಾಶಿನಾಥ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ನೇಕಾರ ಸಮುದಾಯದವರು ಭಾಗವಹಿಸಿದ್ದರು.