ದೇಸಿ ರಾಸುಗಳ ಸಂರಕ್ಷಣೆಗೆ ಒತ್ತು: ಶಶಿಧರ
ಕೂಡ್ಲಿಗಿ: ದೇಶೀಯ ರಾಸುಗಳಾದ ಅಮೃತಮಹಲ್, ಹಳ್ಳಿಕಾರ, ದೇವಣಿ, ಕಿಲಾರಿ ಸೇರಿದಂತೆ ಅನೇಕ ತಳಿಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಪಶುವೈದ್ಯ ಇಲಾಖೆ ಹೆಚ್ಚಿನ ಆಸಕ್ತಿ ವಹಿಸುತ್ತಿದೆ ಎಂದು ಬಳ್ಳಾರಿ ಸಮೀಪದ ಹಗರಿ ಸಹಾಯಕ ಪಶುವೈದ್ಯ ತರಬೇತಿ ಕೇಂದ್ರ ವೈದ್ಯಾಧಿಕಾರಿ ಡಾ. ಶಶಿಧರ ತಿಳಿಸಿದರು.
ತಾಲೂಕಿನ ಚಿಕ್ಕಜೋಗಿಹಳ್ಳಿ ಪಶು ಚಿಕಿತ್ಸಾಲಯದಲ್ಲಿ ಇತ್ತೀಚಿಗೆ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಾಯೋಗಿಕ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಪ್ರದೇಶದ ಜನರು ಇಂದಿಗೂ ದೇಶೀಯ ತಳಿಗಳ ಹಸುಗಳನ್ನು ಸಾಕಲು ಆಸಕ್ತಿ ಹೊಂದಿರುವ ಕಾರಣ ಅಂಥ ತಳಿಗಳನ್ನು ವೃದ್ಧಿಸಲು ಪಶುವೈದ್ಯ ಇಲಾಖೆ ಮುಂದಾಗಿದೆ ಎಂದು ತಿಳಿಸಿದರು.
ಸ್ಥಳೀಯ ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಅನಿಲ್ಕುಮಾರ್ ಮಾತನಾಡಿ, ವಿಶ್ವದಲ್ಲಿಯೇ ದೇಶ ಹೆಚ್ಚು ಹಾಲು ಉತ್ಪಾದಿಸುತ್ತಿದೆ. ಪಶುವೈದ್ಯ ಇಲಾಖೆಯ ಉತ್ತಮ ವೈಜ್ಞಾನಿಕ ಚಿಂತನೆ ಪೂರಕವಾಗಿದೆ ಎಂದು ತಿಳಿಸಿದರು.
ಹಗರಿ ಕೃಷಿ ತರಬೇತಿ ಕೇಂದ್ರದ ವಿಜ್ಞಾನಿ ಡಾ. ರಮೇಶ, ಸೀಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಡಾ. ಬಾಳೆಕಾಯಿ, ಸ್ಥಳೀಯ ಪಶುವೈದ್ಯ ಚಿಕಿತ್ಸಾಲಯ ಪರೀಕ್ಷಕ ಸಂಜೀವ ರೆಡ್ಡಿ, ಮಂಗಳಾ, ನಾಗರಾಜ, ಮಹಬಾಷಾ ಇತರರಿದ್ದರು.